ನವದೆಹಲಿ: ಭಾರತದಲ್ಲಿ ಈವರೆಗೆ ಕೋವಿಡ್ ನ ಹೊಸ ರೂಪಾಂತರಿ ಒಮಿಕ್ರಾನ್ ವೈರಸ್ ಪ್ರಭೇದ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ ಸುಖ್ ಮಾಂಡವೀಯಾ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡುತ್ತ ಹೇಳಿದರು.
ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ವರ್ಗೀಕರಿಸಿದಂತೆ ನೂತನ ರೂಪಾಂತರಿ ತಳಿಯನ್ನು ಒಮಿಕ್ರಾನ್ (ಬಿ.1.1.529) ಎಂದು ಹೆಸರಿಸಿತ್ತು. ಅಲ್ಲದೇ ಇದೊಂದು ಕಳವಳಕಾರಿ ವೈರಸ್ ಎಂದು ತಿಳಿಸಿತ್ತು. ಒಮಿಕ್ರಾನ್ ವೈರಸ್ ಜಾಗತಿಕವಾಗಿ ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ ಎಂದು ಎಚ್ಚರಿಸಿತ್ತು.
ಒಮಿಕ್ರಾನ್ ಕುರಿತ ಪ್ರಶ್ನೆಗೆ ಉತ್ತರಿಸಿದ ಮಾಂಡವೀಯ, ನೂತನ ಪ್ರಭೇದದ ಸೋಂಕು ಜಗತ್ತಿನ 14 ದೇಶಗಳಲ್ಲಿ ಪತ್ತೆಯಾಗಿದೆ. ಆದರೆ ಭಾರತದಲ್ಲಿ ಈವರೆಗೂ ಒಂದೂ ಒಮಿಕ್ರಾನ್ ಪ್ರಕರಣ ವರದಿಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ನಾವು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಭಾರತದಲ್ಲಿ ಕೋವಿಡ್ 19 ಸೋಂಕು ನಿಯಂತ್ರಣದಲ್ಲಿದೆ. ಆದರೆ ಕೋವಿಡ್ ಸೋಂಕು ಸಂಪೂರ್ಣವಾಗಿ ಹೋಗಿಲ್ಲ. ದೇಶಾದ್ಯಂತ ಈವರೆಗೆ 124 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಮಾಂಡವೀಯಾ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.