ಚಿಕ್ಕಮಗಳೂರು : ಪ್ರವಾಸಿಗರ ರಮಣೀಯ ತಾಣ ಎತ್ತಿನ ಭುಜಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಬರುವ ರಮಣೀಯ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಎತ್ತಿನಭುಜ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಿದ್ದು, ಚಾರಣಕ್ಕೆ ಬ್ರೇಕ್ ಹಾಕಿದೆ.
ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು ಎತ್ತಿನಭುಜದ ಸಮೀಪ ಮ್ಯಾರಥಾನ್ ಆಯೋಜನೆ ಮಾಡಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಹಲವರು ಇದನ್ನು ವಿರೋಧಿಸಿದ್ದರು. ಆದ್ದರಿಂದ ಅರಣ್ಯ ಇಲಾಖೆ ಎತ್ತಿನ ಭುಜಕ್ಕೆ ಹೋಗುವ ಮಾರ್ಗವನ್ನೇ ಬಂದ್ ಮಾಡಿದ್ದು, ಪ್ರವಾಸಿಗರಲ್ಲಿ ಭಾರೀ ನಿರಾಸೆ ಮೂಡಿದೆ.
ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರಿಂದ ವ್ಯಕ್ತವಾದ ವಿರೋಧದ ಹಿನ್ನೆಲೆಯಲ್ಲಿ ಎತ್ತಿನ ಭುಜ ಸುತ್ತಮುತ್ತ ನಡೆಯಲಿದ್ದ ಮ್ಯಾರಥಾನ್ ರದ್ದಾಗಿತ್ತು. ಎತ್ತಿನ ಭುಜ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಯಾವುದೇ ಮಾರ್ಗಸೂಚಿ ಇಲ್ಲದೇ ಮೋಜು ಮಸ್ತಿ, ಪಾರ್ಟಿ, ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿತ್ತು ಎಂಬ ದೂರುಗಳು ಕೂಡ ಕೇಳಿಬಂದಿತ್ತು.