ಪುತ್ತೂರು: ನಗರದ ಕೊಂಬೆಟ್ಟು ಸರ್ಕಾರಿ ಜ್ಯೂನಿಯರ್ ಕಾಲೇಜ್ ನಲ್ಲಿ ಭಿನ್ನ ಕೋಮಿಗೆ ಸೇರಿದ ಎರಡು ವಿದ್ಯಾರ್ಥಿಗಳ ತಂಡದ ನಡುವೆ ಎರಡು ಬಾರಿ ಹೊಡೆದಾಟ ಹಾಗೂ ಒಂದು ಬಾರಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕೋಮಿಗೆ ಸೇರಿದ ನಾಲ್ವರು ವಿದ್ಯಾರ್ಥಿಗಳನ್ನು ಪುತ್ತೂರು ಮಹಿಳಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನ 26 ರಂದು ಸಂಜೆ ನಡೆದಿದೆ.
ಹಿಂದೂ ವಿದ್ಯಾರ್ಥಿನಿಯ ಜೊತೆ ಅನ್ಯ ಧರ್ಮೀಯ ವಿದ್ಯಾರ್ಥಿ ಮಾತನಾಡಿದ ವಿಚಾರವಾಗಿ ಪಿಯು ಕಾಲೇಜಿನ ಕೆಲವು ವಿದ್ಯಾರ್ಥಿಗಳು ಪರಸ್ಪರ ಹೊಡೆದಾಟ ನಡೆಸಿದ್ದರು.
ಘಟನೆ ನಡೆದು ಎರಡು ದಿನ ಕಳೆದ ಬಳಿಕ ಹಲ್ಲೆ ಚೂರಿ ಇರಿತದಂತಹ ಅಹಿತಕರ ಘಟನೆಗಳು ಪುತ್ತೂರಿನ ಕೊಂಬೆಟ್ಟು ಜೂನಿಯರ್ ಕಾಲೇಜಿನ ಸಮೀಪ ನಡೆದಿತ್ತು.
ಈ ಗಲಾಟೆಯನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆಗಳಾದ ಎಬಿವಿಪಿ ಹಾಗೂ ಸಿಎಫ್ಐ ಪ್ರತಿಭಟನೆ ನಡೆಸಿತು. ಚೂರಿ ಇರಿದ ವಿದ್ಯಾರ್ಥಿಗಳನ್ನು ಹಾಗೂ ಹಿಂದೂ ನಾಯಕರನ್ನು ಬಂಧಿಸಬೇಕೆಂದು ಸಿಎಫ್ಐ ಹಾಗೂ ಮುಸ್ಲಿಂ ಯೂನಿಯನ್ ನ ಪದಾಧಿಕಾರಿಗಳು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಇದೀಗ ಈ ಗಲಾಟೆಗೆ ಸಂಬಂಧಿಸಿದಂತೆ ಇತ್ತಂಡಗಳಿಂದ ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದ್ದು ಹಿಂದೂ ಸಂಘಟನೆ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಠಾಣೆಯೆದುರು ಜಮಾಯಿಸಿದ್ದಾರೆ .