ಉಡುಪಿ: ಪರಿಸರ ಪ್ರೇಮಿಗಳ ಅವಿರತ ಪ್ರಯತ್ನಗಳ ಹೊರತಾಗಿಯೂ ಬೆಳ್ತಂಗಡಿ ತಾಲೂಕು ವೇಣೂರು ಬಳಿಯ ಕರಿಮಣೇಲು ಗ್ರಾಮದಲ್ಲಿದ್ದ ಶ್ರೀತಾಳೆಮರ ಕೊನೆಗೂ ಮೌಢ್ಯಕ್ಕೆ ಬಲಿಯಾಗಿದೆ ಎಂದು ಮರವನ್ನು ಉಳಿಸಲು ಹೋರಾಡಿದ ಉಡುಪಿಯ ಪ್ರೊ.ಎಸ್.ಎ.ಕೃಷ್ಣಯ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.
ತಮ್ಮ ಸತತ ಪ್ರಯತ್ನದಿಂದ ಉಡುಪಿ ಸಮೀಪದ ಆತ್ರಾಡಿಯಲ್ಲಿದ್ದ ಶ್ರೀತಾಳೆ ಮರವನ್ನು ಮನೆಯವರ ಜೊತೆ ಮಾತನಾಡಿ ಉಳಿಸುವಲ್ಲಿ ನಾವು ಯಶಸ್ವಿಯಾಗಿದ್ದೆವು. ಆ ಮನೆಯ ಯಜಮಾನರು ಇಂದಿಗೂ ಜೀವಂತವಾಗಿದ್ದಾರೆ. ಕರಿಮಣೇಲು ಮನೆಯವರಿಗೂ ಮನವರಿಕೆ ಮಾಡುವ ಎಲ್ಲಾ ಪ್ರಯತ್ನಗಳನ್ನು ನಾವು ಮಾಡಿದ್ದರೂ ಸಫಲವಾಗಿಲ್ಲ ಎಂದು ಪ್ರೊ.ಕೃಷ್ಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವದಲ್ಲಿಯೇ ಈ ಮರ ಕೆಂಪು ಪಟ್ಟಿಯಲ್ಲಿ ಇರುವುದರಿಂದ ಇಂತಹ ಮರಗಳು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ದೇಶಾದ್ಯಂತ ಇರುವುದರಿಂದ, ಈ ಮರವನ್ನು ಗುರುತಿಸುವ ಹಾಗೂ ರಕ್ಷಣೆ ಮಾಡುವಲ್ಲಿ ಸೂಕ್ತ ಕಾನೂನು ಆಗಬೇಕೆಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸರಕಾರ ಮಟ್ಟದಲ್ಲಿ ಈ ಮರ ಉಳಿಸುವಲ್ಲಿ ಜನಜಾಗೃತಿ ಆಗಬೇಕಾಗಿದೆ ಎಂದು ಪ್ರೊ.ಎಸ್.ಎ.ಕೃಷ್ಣಯ್ಯ ಅಭಿಪ್ರಾಯ ಪಟ್ಟಿದ್ದಾರೆ.