ಪುತ್ತೂರು: ಕೊಂಬೆಟ್ಟು ಕಾಲೇಜ್‍ನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಬುಧವಾರ ಸಂಜೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿದ್ಯಾರ್ಥಿಗಳು ಧರಣಿ ನಡೆಸಿದರು.
ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪಿಗಳನ್ನು 24 ಗಂಟೆಗಳ ಒಳಗಾಗಿ ಬಂಧಿಸುವಂತೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆಗ್ರಹಿಸಿದರು.
ಪುತ್ತೂರು ಡಿವೈಎಸ್‍ಪಿ ಅವರು ಸಕಾರಾತ್ಮಕ ಭರವಸೆ ನೀಡಿದ ಬಳಿ ಧರಣಿಯನ್ನು ಹಿಂಪಡೆದರು. ಧರಣಿಯಲ್ಲಿ ಸಿಎಫ್‍ಐ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾಧ್ಯಕ್ಷ ಅನ್ಸಾರ್ ಬೆಳ್ಳಾರೆ, ಮುಖಂಡದಾರ ರಿಯಾಝ್ ಅಂಕತಡ್ಕ, ಫಾರೂಕ್ ಕಬಕ, ಸಂಶುದ್ದೀನ್ ವಿಟ್ಲ ಮತ್ತಿತರರು ಪಾಲ್ಗೊಂಡಿದ್ದರು.
ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಮಂಗಳವಾರ ಪುತ್ತೂರು ನಗರದ ಕೊಂಬೆಟ್ಟು ಸರ್ಕಾರಿ ಕಾಲೇಜೊಂದರಲ್ಲಿ ವಿದ್ಯಾರ್ಥಿಯೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣದ ಬೆನ್ನಲ್ಲೇ ಬುಧವಾರ ಮತ್ತೆ ಮೂವರು ವಿದ್ಯಾರ್ಥಿಗಳ ಮೇಲೆ ಮಾರಕ ಆಯುಧಗಳಿಂದ ಹಲ್ಲೆ ನಡೆಸಲಾಗಿದ್ದು, ಗಾಯಾಳುಗಳ ಪೈಕಿ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.