ಮಂಗಳೂರು: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ದಿನೇದಿನೆ ಕಾವು ಪಡೆದುಕೊಳ್ಳುತ್ತಿದೆ. ದ.ಕ ಕ್ಷೇತ್ರದಿಂದ ಸಹಕಾರಿ ಧುರೀಣ ರಾಜೇಂದ್ರ ಕುಮಾರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಎಂ.ಎನ್. ರಾಜೇಂದ್ರ ಕುಮಾರ್ ವಿರುದ್ಧ ಮೊದಲ ಬಾರಿಗೆ ದನಿ ಎತ್ತಿದ್ದಾರೆ.
ಮಂಗಳೂರು ಹೊರವಲಯದ ಅಡ್ಯಾರಿನಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ವಿರುದ್ಧ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ನೇರ ವಾಗ್ದಾಳಿ ನಡೆಸಿದ್ದಾರೆ.
ಎಸ್ ಸಿ ಡಿ ಸಿ ಸಿ ಬ್ಯಾಂಕ್ ಆಸ್ತಿಯನ್ನು ದುರುಪಯೋಗ ಮಾಡಲಾಗುತ್ತಿದೆ. ಸಹಕಾರಿ ಬ್ಯಾಂಕುಗಳ ಹಣವನ್ನು ದುರುಪಯೋಗ ಪಡಿಸಲಾಗುತ್ತಿದೆ. ಅಕ್ರಮ ಎಸಗಲಾಗುತ್ತಿದೆ ಎಂದು ಆರೋಪಿಸಿದ ಸಚಿವ ಸೋಮಶೇಖರ್, ರಾಜೇಂದ್ರ ಕುಮಾರ್ ಹೆಸರೆತ್ತದೆ ವಾಗ್ದಾಳಿ ನಡೆಸಿದ್ದಾರೆ.
ನವೋದಯ ಟ್ರಸ್ಟ್ ಹೆಸರಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕಿನಿಂದ ಹಣ ರವಾನೆ ಮಾಡುತ್ತಿರುವುದು ಕಾನೂನು ಬಾಹಿರ. ಈ ರೀತಿಯ ಕಾನೂನು ಬಾಹಿರ ಚಟುವಟಿಕೆಗೆ ಡಿಸಿಸಿ ಬ್ಯಾಂಕನ್ನು ಬಳಸುತ್ತಿರುವುದು ಅಕ್ಷಮ್ಯ. ಎಸ್ ಸಿ ಡಿ ಸಿ ಸಿ ಬ್ಯಾಂಕಿನಿಂದ 19 ಲಕ್ಷ ರೂಪಾಯಿ ಹಣವನ್ನು ಪ್ರತಿ ತಿಂಗಳು ನವೋದಯ ಟ್ರಸ್ಟ್ ಗೆ ಕಾನೂನು ಬಾಹಿರವಾಗಿ ನೀಡಲಾಗುತ್ತಿದೆ. ಬ್ಯಾಂಕ್ ಅಧ್ಯಕ್ಷರ ಅಕ್ರಮಕ್ಕೆ ಸಹಕಾರಿ ಇಲಾಖೆಯ ಅಧಿಕಾರಿಗಳು ಸಹಕರಿಸುತ್ತಿದ್ದಾರೆ. ಅಕ್ರಮ ಆಗುತ್ತಿದ್ದರೂ ಅಧಿಕಾರಿಗಳು ಸಹಕರಿಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಈ ರೀತಿ ಅಕ್ರಮಕ್ಕೆ ಸಹಕಾರ ನೀಡುತ್ತಿರುವ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುತ್ತೇನೆ. ಅಕ್ರಮವನ್ನು ಮಟ್ಟ ಹಾಕುತ್ತೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಇದನ್ನೇ ಪುನರುಚ್ಚರಿಸಿರುವ ಸಚಿವರು, ದಕ್ಷಿಣ ಕನ್ನಡ – ಉಡುಪಿ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರನ್ನು ತೆಗೆದುಹಾಕುವ ಅಧಿಕಾರ ಸರಕಾರಕ್ಕೆ ಇದೆ ಎಂದು ಎಚ್ಚರಿಸಿದ್ದಾರೆ.
ರಾಜೇಂದ್ರ ಕುಮಾರ್ ಪರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ನಾಯಕರು ಇದ್ದರೂ, ಇದೀಗ ರಾಜೇಂದ್ರ ಕುಮಾರ್ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾಹಿತಿ ಬೆನ್ನಲ್ಲೇ ಬಿಜೆಪಿ ಸರಕಾರದ ಸಚಿವರು ತಿರುಗಿ ಬಿದ್ದಿದ್ದಾರೆ. ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದರೆ ಪರಿಣಾಮ ನೆಟ್ಟಗಿರಲ್ಲ ಎನ್ನುವ ಸುಳಿವನ್ನು ಬಿಜೆಪಿ ನಾಯಕರು ನೀಡಿದ್ದಾರೆ. ಬಿಜೆಪಿ ಪ್ರಭಾವಿ ನಾಯಕರ ಸಹಕಾರದಲ್ಲಿ ಪಕ್ಷೇತರ ಸ್ಪರ್ಧೆಗೆ ಮುಂದಾಗಿದ್ದ ರಾಜೇಂದ್ರ ಕುಮಾರ್, ಪಕ್ಷೇತರನಾಗಿ ಸ್ಪರ್ಧಿಸಿದರೆ ಗೆಲುವು ದಕ್ಕದು ಎಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಗಾಳ ಬೀಸಿದ್ದಾರೆ ಎನ್ನಲಾಗಿದೆ.