ಬೆಂಗಳೂರು: ಕಳೆದೆರಡು ವಾರಗಳಿಂದ ಸತತವಾಗಿ ಬೀಳುತ್ತಿರುವ ಮಳೆ ಇನ್ನೂ ಮೂರು ದಿನಗಳ ಕಾಲ ಮುಂದುವರೆಯುವ ಮುನ್ಸೂಚನೆಗಳಿವೆ. ನಿರಂತರವಾಗಿ ಬೀಳುತ್ತಿರುವ ಮಳೆಗೆ ರಸ್ತೆಗಳು ಹಾನಿಗೀಡಾಗಿವೆ. ಕೆಲವೆಡೆ ಮನೆ ಕುಸಿತ, ರಸ್ತೆ ಕುಸಿತವೂ ಉಂಟಾದ ವರದಿಯಾಗಿದೆ. ಮುಂಗಾರು ಹಂಗಾಮಿನ ಬಹುತೇಕ ಬೆಳೆಗಳು ಸತತ ಮಳೆಗೆ ಸಿಕ್ಕಿ ಹಾನಿಗೀಡಾಗಿವೆ. ಅಕಾಲಿಕ ಮಳೆಗೆ ಜನಜೀವನ ತತ್ತರಿಸುವಂತಾಗಿದೆ. ಹಿಂಗಾರು ಮಳೆ ಆರಂಭದಿಂದಲೂ ಚುರುಕಾಗಿದ್ದು, ನಿರಂತರವಾಗಿ ಬೀಳುತ್ತಿದೆ.
ನಿನ್ನೆಯೂ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಕೆಲವೆಡೆ ಸಾಧಾರಣ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ಭಾರೀ ಮಳೆಯಾಗಿ ಆಸ್ತಿ-ಪಾಸ್ತಿ ಹಾಗೂ ಬೆಳೆ ಹಾನಿಗೂ ಕಾರಣವಾಗಿದೆ. ನಿನ್ನೆ ಮುಂಜಾನೆಯಿಂದಲೇ ಆರಂಭವಾದ ಜಿಟಿ ಜಿಟಿ ಮಳೆ ಇಡೀ ದಿನ ಸುರಿದು ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಎರಡು ಪ್ರತ್ಯೇಕ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಮೇಲೆ ಉಂಟಾಗಿದ್ದು, ಮೋಡ ಮುಸುಕಿದ ವಾತಾವರಣ ಕಂಡುಬರುತ್ತಿದೆ. ಆಗಾಗ್ಗೆ ಹಗುರದಿಂದ ಸಾಧಾರಣ ಮಳೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಆಗುತ್ತಿದೆ. ಶಿಡ್ಲಘಟ್ಟ, ಮಾಲೂರು, ಬಂಗಾರಪೇಟೆ ಗಳಲ್ಲಿ ಭಾರೀ ಮಳೆ ಬಿದ್ದ ವರದಿಯಾಗಿದೆ.
ಬೆಂಗಳೂರಿನಲ್ಲೂ ಕೆಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ, ನಾಳೆವರೆಗೂ ಮಳೆ ಇದೇ ರೀತಿ ಮುಂದುವರಿಯುವ ಮುನ್ಸೂಚನೆಗಳಿವೆ. ಆ ನಂತರ ಮಳೆ ಪ್ರಮಾಣ ತಗ್ಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು. ನಿನ್ನೆ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಮಳೆ ರಾಜ್ಯದಲ್ಲಾಗಿದೆ. ಮೈಸೂರು, ಚಾಮರಾಜನಗರ ಭಾಗಗಳಲ್ಲಿ ಕಡಿಮೆ ಮಳೆಯಾಗಿದ್ದರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ನಗರ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಮೊದಲಾದ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲೂ ಇಂದಿನಿಂದ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ನಿರಂತರ ಮಳೆಯಾಗುತ್ತಿದೆ. ಲಾನೀನ ಪ್ರಭಾವದಿಂದಾಗಿ ಹೆಚ್ಚು ಮಳೆಯಾಗುತ್ತಿದೆ. ಭಾನುವಾರದ ನಂತರ ಮಳೆ ಪ್ರಮಾಣ ಇಳಿಕೆಯಾಗಲಿದ್ದು, ಸೋಮವಾರ ತೆರವಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ. ಭಾನುವಾರ ಬಿಸಿಲು ನಿರೀಕ್ಷಿಸಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹವಾಮಾನ ಬದಲಾವಣೆಯಿಂದ ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದರು. ಅಕಾಲಿಕ ಮಳೆಯಿಂದಾಗಿ ಅತಿವೃಷ್ಟಿ ಉಂಟಾಗಿದ್ದು, ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ಅಡಿಕೆ, ಶೇಂಗಾ ಸೇರಿದಂತೆ ಹಲವು ಬೆಳೆಗಳು ಹಾನಿಗೀಡಾಗಿವೆ. ಕೊಯ್ಲಿಗೆ ಬಂದಿದ್ದ ಬಹುತೇಕ ಬೆಳೆಗಳು ನೆಲ ಕಚ್ಚಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಹಾನಿಗೆ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದಾರೆ.