ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯಾದ ವಕೀಲ ಕೆ.ಎಸ್.ಎನ್ ರಾಜೇಶ್ ಭಟ್ ಅವರ ಮನೆಯಲ್ಲಿ ಪೊಲೀಸರು ನ.18ರ ಬುಧವಾರ ಶೋಧ ನಡೆಸಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಎಸಿಪಿ ರಂಜಿತ್ ಬಂಡಾರು ಅವರ ನೇತೃತ್ವದ ಪೊಲೀಸರ ತಂಡ ಬಿಜೈನ ಮನೆಯಲ್ಲಿ ಶೋಧ ನಡೆಸಿದೆ. ತನಿಖೆಗೆ ಅಗತ್ಯವಾದ ದಾಖಲೆಗಳಿಗಾಗಿ ಶೋಧ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿನ ಖ್ಯಾತ ವಕೀಲರಾಗಿದ್ದ ರಾಜೇಶ್ ಭಟ್ ಅವರು ತಮ್ಮ ಕಚೇರಿಯಲ್ಲಿ ಇಂಟರ್ನ್‌ಶಿಪ್‌ಗೆ ಬಂದ ಕಾನೂನು ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.ತನ್ನ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ ರಾಜೇಶ್ ಭಟ್ ಪರಾರಿಯಾಗಿದ್ದಾರೆ. ಆರೋಪಿ ಭಟ್‌ಗಾಗಿ ಶೋಧ ನಡೆಸುತ್ತಿರುವ ಪೊಲೀಸರು ಆತ ವಿದೇಶಕ್ಕೆ ಹೋಗದಂತೆ ತಡೆಯಲು ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಿದ್ದಾರೆ. ಇದೀಗ ರಾಜೇಶ್ ಭಟ್ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಮನೆ ಶೋಧ ನಡೆಸಿದ್ದಾರೆ.