ರಾಟಿಬಾದ್: ಮಗಳು ಬೇರೆ ಜಾತಿಯವನನ್ನು ಮದುವೆಯಾಗಿದ್ದಕ್ಕೆ ಕೋಪದಿಂದ ತಂದೆ ಆಕೆಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಹೀನ ಕೃತ್ಯ ಮಧ್ಯಪ್ರದೇಶದ ರಾಟಿಬಾದ್ ನಲ್ಲಿ ನಡೆದಿದೆ.
ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿರುವ ಮಹಿಳೆಗೆ 8 ತಿಂಗಳ ಮಗು ಇತ್ತು. ಆದರೆ ಆ ಮಗು ಇತ್ತೀಚೆಗಷ್ಟೇ ಅನಾರೋಗ್ಯದಿಂದ ಮೃತಪಟ್ಟಿತ್ತು. ಮೃತ ಮಗುವಿನ ಅಂತ್ಯಕ್ರಿಯೆಗಾಗಿ ಮಗಳನ್ನು ಕಾಡಿನ ಸಮೀಪ ಕರೆದುಕೊಂಡು ಹೋಗಿ ತಂದೆಯೇ ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾನೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಸಧ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತನಿಖೆ ನಡೆಸಿದ ರಾಟಿಬಾದ್ ಠಾಣೆ ಅಧಿಕಾರಿ ಸುದೇಶ್ ತಿವಾರಿ ಈ ಪ್ರಕರಣದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ‘ಈಗೆರಡು ದಿನಗಳ ಹಿಂದೆ ಸಂಸಗಡ್ ಅರಣ್ಯ ಪ್ರದೇಶದಲ್ಲಿ ತಾಯಿ ಮತ್ತು ಮಗುವಿನ ಮೃತದೇಹ ಸಿಕ್ಕಿದೆ. ಅದು ಪತ್ತೆಯಾದ ನಂತರ ತನಿಖೆ ಶುರು ಮಾಡಲಾಯಿತು. ನಂತರ ಆ ಮಹಿಳೆ ಸೆಹೋರ್ ಜಿಲ್ಲೆಯ ಬಿಲ್ಕಿಸ್ಗಂಜ್ನವರು ಎಂಬುದು ಗೊತ್ತಾಯಿತು. ನಂತರ ಅವರ ಕುಟುಂಬದವರನ್ನೆಲ್ಲ ವಿಚಾರಣೆ ಮಾಡಿದ ಸತ್ಯ ಬೆಳಕಿಗೆ ಬಂದಿದೆ.
ಮೃತ ಮಹಿಳೆ ಬೇರೆ ಜಾತಿಯವನೊಬ್ಬನನ್ನು ಪ್ರೀತಿಸಿದ್ದಳು. ಆದರೆ ಆತನೊಂದಿಗೆ ಮದುವೆ ಮಾಡಿಕೊಡಲು ಆಕೆಯ ಪಾಲಕರಿಗೆ, ಅದರಲ್ಲೂ ಕೂಡ ತಂದೆಗೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ನಂತರ ಆಕೆ ಓಡಿಹೋಗಿ ಮದುವೆಯಾದಳು. ಇಷ್ಟು ದಿನಗಳಲ್ಲಿ ಒಮ್ಮೆಯೂ ಮಹಿಳೆ ತನ್ನ ತವರು ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಅಕ್ಕ-ಪಕ್ಕದ ಮನೆಯವರು ಆಡಿಕೊಳ್ಳುತ್ತಿದ್ದರು. ಕೊನೆಗೆ ಮೊನ್ನೆ ನಡೆದ ದೀಪಾವಳಿ ಹಬ್ಬಕ್ಕೆ ಮಹಿಳೆ ತನ್ನ 8 ತಿಂಗಳ ಮಗುವೊಂದಿಗೆ ಅಕ್ಕನ ಮನೆಗೆ ಬಂದಿದ್ದಳು. ಆದರೆ ಅಲ್ಲೇ ಆಕೆಯ ಮಗು ಅನಾರೋಗ್ಯದಿಂದ ತೀರಿಕೊಂಡಿತು. ಆಗ ಅಕ್ಕ ಏನೂ ಮಾಡಲು ತೋಚದೆ ತಂದೆಗೆ ವಿಷಯ ತಿಳಿಸಿದಳು.
ವಿಷಯ ತಿಳಿದ ತಂದೆ ತನ್ನ ಮಗನೊಂದಿಗೆ ರಾಟಿಬಾದ್ಗೆ ತಲುಪಿ, ಮಗುವಿನ ಅಂತ್ಯಕ್ರಿಯೆಗೆಂದು ಮಗಳನ್ನೂ ಕರೆದುಕೊಂಡು ಅರಣ್ಯಕ್ಕೆ ಹೋಗಿದ್ದನು. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದಾನೆ. ಎಲ್ಲ ರೀತಿಯ ವಿಚಾರಣೆಯ ಬಳಿಕ 55 ವರ್ಷದ ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿವಾರಿ ತಿಳಿಸಿದ್ದಾರೆ.