ಬೆಂಗಳೂರು: ಅಕಾಲಿಕವಾಗಿ ವಿಧಿವಶರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. ಪುನೀತ ನಮನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ಗೆ ಮರಣೋತ್ತರ ಕರ್ನಾಟಕ ರತ್ನ ಘೋಷಿಸಿ, ರಾಜಕುಮಾರ್ ರಂತೆ ಪುನೀತ್ ಗೂ ಸ್ಮಾರಕ ನಿರ್ಮಿಸುವುದಾಗಿ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಪುನೀತ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಘೋಷಿಸಿದರು. ಪುನೀತ್ ಅತ್ಯುತ್ತಮ ಚಾರಿತ್ರ್ಯದ ಕಾರಣ ಇತಿಹಾಸದ ಪುಟಗಳಲ್ಲಿ ಸೇರಿದ್ದಾರೆ. ಅವರಂತೆ ವಿನಯ, ವಿಧೇಯತೆಯನ್ನು ರೂಢಿಸಿಕೊಂಡವರು ಕಡಿಮೆ ಎಂದರು.
ಕೇವಲ ಕರ್ನಾಟಕ ರತ್ನ ಮಾತ್ರವಲ್ಲದೆ ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೂ ಅಪ್ಪು ಭಾಜನರಾಗುವ ಬಗ್ಗೆ ಚಿಂತನೆ ನಡೆಸಲಾಗುವುದು. ಡಾ ರಾಜ್ ಕುಮಾರ್ ಸ್ಮಾರಕದಂತೆ ಪುನೀತ್ ಸ್ಮಾರಕವನ್ನೂ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.