ಇಸ್ಲಾಮಾಬಾದ್: ಮೂರು ವರ್ಷಗಳಿಂದ ಪಾಕಿಸ್ತಾನದ ಪ್ರಧಾನಿಯಾಗಿರುವ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹುದ್ದೆಗೆ ಸಂಚಕಾರ ಬಂದಿದೆ. ದೇಶದ ಗುಪ್ತಚರ ದಳವಾದ ಐಎಸ್‌ಐಗೆ ನೂತನ ಮುಖ್ಯಸ್ಥರನ್ನು ನೇಮಿಸುವ ವಿಚಾರದಲ್ಲಿ ಸೇನೆ ಜೊತೆ ಇಮ್ರಾನ್ ಘರ್ಷಣೆ ತೀವ್ರಗೊಂಡಿದ್ದು, ನ.20ರೊಳಗೆ ನೀವೇ ರಾಜೀನಾಮೆ ನೀಡಿ, ಇಲ್ಲದಿದ್ದರೆ ನಾವು ಇಳಿಸುತ್ತೇವೆ ಎಂದು ಸೇನಾಪಡೆ ಮುಖ್ಯಸ್ಥ ಜ| ಕಮರ್ ಜಾವೇದ್ ಬಜ್ವಾ ಗಡುವು ನೀಡಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಮೂಲಗಳ ಪ್ರಕಾರ ಇಮ್ರಾನ್ ಖಾನ್‌ಗೆ ಎರಡು ಆಯ್ಕೆಗಳನ್ನು ಸೇನೆ ನೀಡಿದೆ. 1.ನ.20ರೊಳಗೆ ಅವರೇ ರಾಜೀನಾಮೆ ನೀಡುವುದು. 2.ರಾಜೀನಾಮೆ ನೀಡದಿದ್ದರೆ ವಿರೋಧ ಪಕ್ಷಗಳು ಸಂಸತ್ತಿನೊಳಗೆ ಬದಲಾವಣೆ ತಂದು ಇಮ್ರಾನ್ ಖಾನ್‌ರನ್ನು ಪ್ರಧಾನಿ ಹುದ್ದೆಯಿಂದ ಇಳಿಸುತ್ತವೆ.
ಇಮ್ರಾನ್ ಖಾನ್ ಪದತ್ಯಾಗದ ನಂತರ ಅವರದೇ ಪಿಟಿಐ ಪಕ್ಷದ ಪರ್ವೇಜ್ ಖಟ್ಟಕ್ ಅಥವಾ ಪಿಎಂಎಲ್ (ನವಾಜ್) ಪಕ್ಷದ ಶಾಬಾಜ್ ಶರೀಫ್ ಅವರ ಪೈಕಿ ಒಬ್ಬರು ಪ್ರಧಾನಿಯಾಗಲಿದ್ದಾರೆ ಎನ್ನಲಾಗಿದೆ.