ಬೆಂಗಳೂರು: ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ ಕನ್ನಡಿಗನಿಗೆ ಅವಮಾನ ಮಾಡಿದ ಘಟನೆ ಸಂಬಂಧ ಕೆನರಾ ಬ್ಯಾಂಕ್ ವಿಷಾದ ವ್ಯಕ್ತಪಡಿಸಿದ್ದು, ಕನ್ನಡಿಗನಿಗೆ ಅವಮಾನ ಮಾಡಿದ ಬ್ಯಾಂಕ್ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಂಡಿದೆ.
ರೈತರೊಬ್ಬರು ಕೆನರಾ ಬ್ಯಾಂಕ್ ಗೆ ತೆರಳಿದ್ದಾಗ, ಅವರು ಕನ್ನಡದಲ್ಲಿ ಸೇವೆ ಕೊಡಿ ಎಂದು ಕೇಳಿದ್ದರು. ಇದಕ್ಕೆ ಧಿಮಾಕಿನಿಂದ ಪ್ರತಿಕ್ರಿಯೆ ನೀಡಿದ್ದ ಉತ್ತರ ಭಾರತ ಮೂಲದ ಸಿಬ್ಬಂದಿ ಕನ್ನಡ ಮಾತನಾಡೋದಿಲ್ಲ. ಬೇಕಾದರೆ ಅಕೌಂಟ್ ಕ್ಲೋಸ್ ಮಾಡಿ. ಬ್ಯಾಂಕ್ ನಿಂದ ಹೊರಗೆ ಹೋಗಿ, ನಾನು ಪೊಲೀಸರಿಗೆ ಫೋನ್ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಬ್ಯಾಂಕ್ ಗೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಕೆನರಾ ಬ್ಯಾಂಕ್ ನ ಹಿರಿಯ ಸಿಬ್ಬಂದಿಯನ್ನು ಭೇಟಿ ಮಾಡಿ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆನರಾ ಬ್ಯಾಂಕ್ ‘ಎಲ್ಲಾ ಕನ್ನಡಿಗರಿಗೆ ಮನವಿ, ನಿನ್ನೆ ಬುಕ್ಕಾಪಟ್ಟಣದ ನಮ್ಮ ಬ್ಯಾಂಕ್ ಶಾಖೆಯಲ್ಲಿ ನಡೆದ ಘಟನೆ ಬಗ್ಗೆ ವಿಷಾದಿಸುತ್ತೇವೆ ಹಾಗೂ ಇನ್ನು ಮುಂದೆ ಇಂತಹ ಘಟನೆ ಆಗದಂತೆ ನೋಡಿಕೊಂಡು, ಈ ಘಟನೆ ಬಗ್ಗೆ ಸಂಬಂಧ ಪಟ್ಟ ಉದ್ಯೋಗಿಯ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸಲು ಕೂಡಲೇ ಆದೇಶಿಸಲಾಗಿದೆ.
ಸದಾ ನಾವು ಕನ್ನಡಪುರ ವಿಚಾರದಲ್ಲಿ ಕನ್ನಡಿಗರ ಜೊತೆ ಇದ್ದೇವೆ. ನಮ್ಮ ಬ್ಯಾಂಕ್ ಜೊತೆ ನಿಮ್ಮ ಸಹಕಾರ ಸದಾ ಮುಂದೆಯೂ ಇರಲಿ ಎಂದೂ ಕೇಳಿಕೊಳ್ಳುತ್ತಿದ್ದೇವೆ. ಕನ್ನಡವೇ ಸತ್ಯ. ಸದಾ ನಿಮ್ಮ ಸೇವೆಗಾಗಿ ಕೆನರಾ ಬ್ಯಾಂಕ್’ ಎಂದು ಪ್ರತಿಕ್ರಿಯೆ ನೀಡಿದೆ.