ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಬೆಂಗಳೂರಲ್ಲಿ ತಾಪಮಾನ ಕುಸಿದಿದ್ದು, ಶೀತಗಾಳಿ ಬೀಸುತ್ತಿದೆ. ನಗರದಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಗುರುವಾರ ದಿನ ಪೂರ್ತಿ ಮಳೆಯಾಗಿದೆ. ಜಿಟಿ ಜಿಟಿ ಮಳೆ ಹಾಗೂ ಶೀತದ ವಾತಾವರಣ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ.
ಬೆಂಗಳೂರು ನಗರದ ತಾಪಮಾನ 17 ರಿಂದ 18 ಡಿಗ್ರಿಗೆ ಕುಸಿದಿದೆ. ಗುರುವಾರ ದಿನಪೂರ್ತಿ ತುಂತುರು ಮಳೆಯಾಗಿದ್ದು, ಜನರ ಸಂಚಾರ ಕಡಿಮೆಯಾಗಿತ್ತು. ದಿನಪೂರ್ತಿ ಮಳೆಯಾದರೂ ಯಾವುದೇ ಅನಾಹುತಗಳು ವರದಿಯಾಗಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ.
ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ನಗರದಲ್ಲಿ 4.2 ಮಿ. ಮೀ. ಮಳೆಯಾಗಿತ್ತು. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3.8 ಮಿ. ಮೀ. ಮಳೆಯಾಗಿದ್ದು, ಎಚ್‌ಎಎಲ್‌ನಲ್ಲಿ 3.5 ಮಿ. ಮೀ. ಮಳೆ ದಾಖಲಾಗಿದೆ. ನಗರದ ತಾಪಮಾನ ದಿನವಿಡೀ 17, 18 ಡಿಗ್ರಿ ಸೆಲ್ಸಿಯಸ್ ನಡುವೆ ಇತ್ತು.
ಶುಕ್ರವಾರ ಮತ್ತು ಶನಿವಾರ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಈ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ. ರಾಮನಗರ, ದಾವಣಗೆರೆ, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ದಕ್ಷಿಣ ಒಳನಾಡಿನ ವ್ಯಾಪ್ತಿಯ ಜಿಲ್ಲೆಗಳಲ್ಲಿ ನವೆಂಬರ್ 14 ಮತ್ತು 15ರಂದು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ತಮಿಳುನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಇದುವರೆಗೂ 14 ಜನರು ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದ ದಕ್ಷಿಣ ಭಾಗ ಮತ್ತು ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಭಾಗಗಳಲ್ಲಿ ಇನ್ನೂ ಎರಡು ದಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.