ಅಂಕೋಲಾ : ವೃಕ್ಷದೇವತೆ ಎಂದೇ ಹೆಸರು ಗಳಿಸಿರುವ ಅಂಕೋಲಾದ ತುಳಸಿ ಗೌಡ ಅವರು ಬರಿಗಾಲಿನಲ್ಲೇ ಸಾಗಿ ರಾಷ್ಟ್ರಪತಿಗಳ ಮುಂದೆ ಅತ್ಯಂತ ಮುಗ್ಧವಾಗಿ ನಿಂತು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಕಾಡಿನ ಮರಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರುವ ತುಳಸಿ ಗೌಡ ಅವರು ತಮ್ಮ ಮಾಮೂಲಿ ದಿರಸಿನಲ್ಲೇ ಪ್ರಶಸ್ತಿಯನ್ನು ಸ್ವೀಕರಿಸಿದರು.
ತಾಯ್ನಾಡಿಗೆ ಮರಳಿದ ಮೇಲೆ ಪ್ರಶಸ್ತಿ ಪಡೆದ ಕ್ಷಣಗಳ ಬಗ್ಗೆ ಹೇಳಿದ ಅವರು, ಅಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ. ನಾನ್ ಹೇಳಿದ್ದು ಅವರಿಗೆ ಗೊತ್ತಾಗ್ತಾ ಇರಲಿಲ್ಲ. ಅವರು ಹೇಳಿದ್ದು ನನಗೆ ಗೊತ್ತಾಗುತ್ತಿರಲಿಲ್ಲ. ಸುಮ್ಮನೆ ಎಲ್ಲದಕ್ಕೂ ಹೂ.. ಹೂ.. ಎಂದು ತಲೆಯಲ್ಲಾಡಿಸುತ್ತಿದ್ದರು ಎಂದು ತುಳಸಿಗೌಡ ಹೇಳಿದರು.
‘ಅಲ್ಲಿ ತುಂಬಾ ದೊಡ್ಡ ಜನ ಇದ್ರು, ಬರೀ ಪ್ರಶಸ್ತಿ ಪಡೆದವರೇ ಇದ್ದರು. ಬಾಕಿ ಜನ ಜಾಸ್ತಿ ಇರಲಿಲ್ಲ. ಅಲ್ಲಿ ಯಾರಿಗೂ ಕನ್ನಡ ಬರೋದಿಲ್ಲ. ಮೋದಿ ಹತ್ರಾನೂ ಮಾತನಾಡಿದೆ ಆದ್ರೆ ಅವರಿಗೂ ಕನ್ನಡ ಬರುವುದಿಲ್ಲ.. ಬರೀ ತಲೆಯಲ್ಲಾಡಿಸುತ್ತ ಹೂ ಹೂ ಎನ್ನುತ್ತಿದ್ರು ಎಂದು ವೃಕ್ಷ ಮಾತೆ ಮುಗ್ದವಾಗಿ ನಗುತ್ತಲೇ ಹೇಳಿಕೊಂಡರು.
ನಾನು ಗಿಡ ನೆಡುತ್ತೇನೆ ಎಂದು ಹೇಳಿ ಪ್ರಶಸ್ತಿ ಪಡೆದೆ. ಅವರಿಗೆ ಕನ್ನಡ ಗೊತ್ತಾಗುತ್ತಿರಲಿಲ್ಲ ಬರೀ ಹಾ.. ಹಾ.. ಎನ್ನುತ್ತಿದ್ರು ಎಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆದ ಅನುಭವನ್ನು ತುಳಸಿ ಗೌಡ ನಗುತ್ತಲೇ ಹೇಳಿಕೊಂಡರು.