ಬೆಂಗಳೂರು; ಬೀದಿನಾಯಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಆಗಾಗ ಸುದ್ದಿಯಾಗುತ್ತದೆ. ಈಗ ಸಾಕುನಾಯಿಗಳ ವಿಚಾರಕ್ಕೆ ಸುದ್ದಿಯಾಗಿದೆ. ಬಿಬಿಎಂಪಿ ಜಾರಿಗೆ ತರಲಿರುವ ನಿಯಮ ಶ್ವಾನ ಪ್ರಿಯರ ನಡುವೆ ಚರ್ಚೆ ಹುಟ್ಟುಹಾಕಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾಯಿಗಳನ್ನು ಸಾಕಲು ಲೈಸೆನ್ಸ್ ಕಡ್ಡಾಯಗೊಳಿಸಲಿದೆ ಮತ್ತು ನಾಯಿಯ ಮಾಲೀಕರು ಸಹ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ. ಈ ನಿಯಮದ ಕರಡು ಪ್ರತಿ ಸಿದ್ಧವಾಗಿದೆ.
ಬಿಬಿಎಂಪಿ ಕಾಯ್ದೆಗಳು 2020ರ ಅನ್ವಯ ನಾಯಿ ಸಾಕಲು ಲೈಸೆನ್ಸ್, ನಾಯಿ ಮಾಲೀಕರ ನೋಂದಣಿ ನಿಯಮ ಜಾರಿಗೊಳಿಸಲಾಗುತ್ತಿದೆ. ಲೈಸೆನ್ಸ್ ಪಡೆದಿರುವ ನಾಯಿಗಳಿಗೆ ಮೈಕ್ರೋ ಚಿಪ್ ಸಹ ಅಳವಡಿಕೆ ಮಾಡಲಾಗುತ್ತದೆ.
ಈಗಾಗಲೇ ಹೊಸ ನಿಯಮದ ಕರಡು ಸಿದ್ಧವಾಗಿದೆ. ಇದನ್ನು 15 ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ಜನರು ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಲು 30 ದಿನದ ಕಾಲಾವಕಾಶ ನೀಡಲಾಗುತ್ತದೆ. ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ ಹೊಸ ನಿಯಮ ಜಾರಿಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.