ಸುಳ್ಯ: ನಿರ್ಮಾಣದ ಹಂತದ ಸೇತುವೆಯ ಪಕ್ಕ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಲ್ಲಿ ಹೊಳೆ ದಾಟಲು ಯತ್ನಿಸಿದ ವೃದ್ದರೋರ್ವರು ಹೊಳೆಯಲ್ಲಿ ಕೊಚ್ಚಿ ಹೋದ ಘಟನೆ ಎಲಿಮಲೆ- ಮರ್ಕಂಜ ರಸ್ತೆಯ ಸೇವಾಜೆ ಎಂಬಲ್ಲಿ ನಡೆದಿದೆ. ವೃದ್ಧರ ಅದೃಷ್ಟದಿಂದ ಕೊಚ್ಚಿಹೋಗುತ್ತಿದ್ದ ಅವರ ಕೈಗೆ ಸಿಕ್ಕಿದ ಬಳ್ಳಿ ಅವರ ಪ್ರಾಣ ಉಳಿಸಿದೆ.
ಎಲಿಮಲೆ – ಮರ್ಕಂಜ ರಸ್ತೆಯ ಸೇವಾಜೆ ನದಿಯನ್ನು ಅಲ್ಲಿನ ವೃದ್ಧ ಗೋಪಾಲ ಎಂಬವರು ಸಂಜೆ ದಾಟಲು ಪ್ರಯತ್ನಿಸಿದ್ದರು. ಅದಾಗಲೇ ಮಳೆ ಆರಂಭಗೊಂಡ ಕಾರಣ ಹೊಳೆಯಲ್ಲಿ ನೀರಿನ ಮಟ್ಟವೂ ಏರಿಕೆಯಾಗಿತ್ತು. ಈ ವೇಳೆ ಕೆಲವರು ಹೊಳೆ ದಾಟದಂತೆ ಸೂಚಿಸಿದ್ದರೂ ದಾಟಲು ಪ್ರಯತ್ನಿಸಿದರು. ಈ ವೇಳೆ ಗೋಪಾಲರು ಹೊಳೆಯ ಮಧ್ಯ ಭಾಗ ತಲುಪುತ್ತಿದ್ದಂತೆ ನೀರು ಉಕ್ಕಿ ಬರತೊಡಗಿತು. ನೀರಿನ ರಭಸಕ್ಕೆ ಗೋಪಾಲರು ನೀರಿನಲ್ಲಿ ಕೊಚ್ಚಿ ಹೋದರೆನ್ನಲಾಗಿದೆ. ನೀರಿನಲ್ಲಿ ಕೊಚ್ಚಿ ಹೋದ ಇವರನ್ನು ನೋಡಿದ ಸೇವಾಜೆ ಅಂಗಡಿಯ ಮಾಲಿಕರೊಬ್ಬರು ಹೊಳೆಯ ಕೆಳಭಾಗದವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದರು. ನೀರಿನಲ್ಲಿ ಕೊಚ್ಚಿ ಹೋದ ಗೋಪಾಲರು ಬದಲಿ ರಸ್ತೆ ಮಾಡಲೆಂದು ತಿಂಗಳ ಹಿಂದೆ ಹಾಕಿದ್ದ ಮೋರಿಯನ್ನು ಹಿಡಿದುಕೊಂಡರೆಂದೂ, ನೀರು ಮತ್ತೂ ಹೆಚ್ಚು ಬಂದು ಅವರು ಅಲ್ಲಿಂದಲೂ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸುಮಾರು ಅರ್ಧ ಕಿಲೋಮೀಟರ್ ಮುಂದಕ್ಕೆ ನೀರಿನಲ್ಲಿ ತೇಲುತ್ತಾ ಹೋಗಿ ಕಾಡು ಬಳ್ಳಿಯೊಂದನ್ನು ಹಿಡಿದು ದಡ ಸೇರಿದರೆನ್ನಲಾಗಿದೆ. ಗೋಪಾಲರಿಗೆ ತರಚಿದ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.