ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಕಾಂಗ್ರೆಸ್ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪಕ್ಷದ ಸಭೆಗಳನ್ನು ನಡೆಸಲು ಸೋಮವಾರ ಬೆಂಗಳೂರಿಗೆ ಆಗಮಿಸಿದ್ದ ಅರುಣ್ ಸಿಂಗ್, ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ನನ ಕಟೀಲ್ ಅವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಕಟೀಲ್ ಹಾಗೂ ಬೊಮ್ಮಾಯಿ ಅವರ ಕೆಲಸಗಳನ್ನು ಶ್ಲಾಘಿಸಿದರು.
ಕಾಂಗ್ರೆಸ್ ಪಕ್ಷವು, ರಾಜ್ಯದ ಬಿಜೆಪಿ ಅಧ್ಯಕ್ಷ ಮತ್ತು ಸಿಎಂ ಬದಲಾವಣೆ ಕುರಿತ ವದಂತಿಯನ್ನು ಎಲ್ಲೆಡೆ ಹಬ್ಬಿಸುತ್ತಿದೆ. ಕಾಂಗ್ರೆಸ್ ಪಕ್ಷವು ಪ್ರಸ್ತುತತೆಯನ್ನು ಕಳೆದುಕೊಂಡಿದ್ದು, ವದಂತಿ ಹರಡುವುದರಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
‘ಬಿಟ್ ಕಾಯಿನ್ ಎಕ್ಸ್‌ಚೇಂಜ್‌ಗಳ ಹ್ಯಾಕಿಂಗ್ ಭ್ರಷ್ಟಾಚಾರದಲ್ಲಿ ಬಿಜೆಪಿ ಸಚಿವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಯ ಮಾತು ಕೇಳಿಬಂದಿತ್ತು. ಬೆಂಗಳೂರು ಪೊಲೀಸರು ಬಂಧಿಸಿದ 26 ವರ್ಷದ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅವರ ಬಿಟ್ ಕಾಯಿನ್ ಕಳ್ಳತನ, ಅಂತರಾಷ್ಟ್ರೀಯ ಬಿಟ್ ಕಾಯಿನ್ ಎಕ್ಸ್‌ಚೇಂಜ್ ಅಕ್ರಮ ಚಟುವಟಿಕೆಗಳ ತನಿಖೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಣಾಮಕಾರಿ ಕ್ರಮ ಕೈಗೊಂಡಿದ್ದಾರೆ. ಕಾಂಗ್ರೆಸ್ ಪ್ರಶ್ನಿಸಲು ಯಾವುದೇ ಸಮಸ್ಯೆಗಳಿಲ್ಲ’ ಎಂದು ಅರುಣ್ ಸಿಂಗ್ ತಿಳಿಸಿದ್ದಾರೆ.