ಬೆಂಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಭೀಮಾ ಜ್ಯುವೆಲ್ಲರಿ ಮಾಲಕನ ಪುತ್ರ ವಿಷ್ಣು ಭಟ್ ಮತ್ತು ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಘಟನೆ ವೇಳೆ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಇದೀಗ ಈ ಹಿನ್ನೆಲೆಯಲ್ಲಿ ಇಬ್ಬರೂ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿರುವ ಶಂಕೆ ವ್ಯಕ್ತವಾಗಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಆರೋಪಿಗಳು ಡ್ರಗ್ ಸೇವಿಸಿರುವುದು ದೃಢಪಟ್ಟ ಬೆನ್ನಲ್ಲೇ ಪೊಲೀಸರು ಭಾನುವಾರ ಆರೋಪಿ ವಿಷ್ಣು ಭಟ್‌ನ ಇಂದಿರಾನಗರ ನಿವಾಸದ ಮೇಲೆ ದಾಳಿ ಮಾಡಿದರು. ಈ ವೇಳೆ ಆತನ ಕೊಠಡಿಯಲ್ಲಿ ಐದು ಗಾಂಜಾ ತುಂಬಿದ ಸಿಗರೆಟ್ ಗಳು ಹಾಗೂ ಗಾಂಜಾ ಪುಡಿ ಪತ್ತೆಯಾಗಿದೆ. ವಿಷ್ಣುಭಟ್ ವಿದೇಶಿ ಡ್ರಗ್ ಪೆಡ್ಲರ್ ಜತೆ ಸಂಪರ್ಕದಲ್ಲಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಈ ನಡುವೆ ಆರೋಪಿಗಳನ್ನು ಜೀವನಭೀಮಾ ನಗರ ಠಾಣೆ ಪೊಲೀಸರು ಭಾನುವಾರ ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಡ್ರಗ್ ಮತ್ತಿನಲ್ಲಿರುವ ಆರೋಪಿಗಳು ಪೊಲೀಸರ ಯಾವುದೇ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಪ್ರಶ್ನೆ ಕೇಳಿದರೆ ಜೋರಾಗಿ ನಗುವುದು ಹಾಗೂ ಚೀರಾಡುವುದನ್ನು ಮಾಡುತ್ತಿದ್ದಾರೆ. ಹೀಗಾಗಿ ಪೊಲೀಸರು ಡ್ರಗ್ ಪೆಡ್ಲಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಬಿಟ್ ಕಾಯಿನ್ ದಂಧೆಯಲ್ಲಿ ನಿಷ್ಣಾತನಾಗಿರುವ ಶ್ರೀಕಿ ಹಾಗೂ ವಿಷ್ಣು ಭಟ್ ವಿದೇಶಿ ಡ್ರಗ್ ಪೆಡ್ಲರ್‌ಗಳ ಸಂಪರ್ಕದಲ್ಲಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ಹೀಗಾಗಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಐದು ದಿನ ವಶಕ್ಕೆ ಪಡೆಯಲಿದ್ದಾರೆ ಮೂಲಗಳು ತಿಳಿಸಿವೆ.
ಆರೋಪಿ ಶ್ರೀಕಿ ಈ ಹಿಂದೆ ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಎಂಬುದು ತಿಳಿದು ಬಂದಿದ್ದು, ಡಾರ್ಕ್ ನೆಟ್ ಮುಖಾಂತರ ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಸಂಪರ್ಕಿಸಿ ಕೊರಿಯರ್ ಮುಖಾಂತರ ವಿದೇಶಗಳಿಂದ ನಗರಕ್ಕೆ ಡ್ರಗ್ಸ್ ತರಿಸುತ್ತಿದ್ದ. ಬಿಟ್‌ಕಾಯಿನ್ ಮೂಲಕ ಈ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದ. ಆರೋಪಿಗೆ ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ತಾರೆಯರೇ ಗ್ರಾಹಕರಾಗಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಇದೀಗ ಶ್ರೀಕಿ ಸ್ನೇಹಿತ ವಿಷ್ಣು ಭಟ್ ಮನೆಯಲ್ಲಿ ಡ್ರಗ್ಸ್ ಪತ್ತೆಯಾಗಿದ್ದು, ಆತನೂ ಕೂಡ ಈ ಡ್ರಗ್ ಪೆಡ್ಲಿಂಗ್‌ನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಈ ಡ್ರಗ್ ಪೆಡ್ಲಿಂಗ್ ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ರಾಜ್ಯದಲ್ಲಿ ಬಿಟ್‌ಕಾಯಿನ್ ದಂಧೆಯ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ ಬಂಧನವಾಗಿರುವುದು ರಾಜ್ಯದ ಕೆಲ ಪ್ರಭಾವಿಗಳು ವ್ಯಕ್ತಿಗಳಿಗೆ ಆತಂಕ ಶುರುವಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಹ್ಯಾಕರ್ ಶ್ರೀಕಿ ತಂಗಿದ್ದ ಖಾಸಗಿ ಹೋಟೆಲ್‌ನ ಕೊಠಡಿಯಲ್ಲಿ ವಶಪಡಿಸಿಕೊಂಡ ಲ್ಯಾಪ್‌ಟಾಪ್ ನ್ನು ಪೊಲೀಸರು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ದೇಶ-ವಿದೇಶಗಳ ವೆಬ್‌ಸೈಟ್ ಹ್ಯಾಕ್, ಬಿಟ್ ಕಾಯಿನ್ ದಂಧೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿಯಾಗಿರುವ ಈ ಶ್ರೀಕಿ, ಸದ್ಯ ಜಾಮೀನ ಮೇಲೆ ಹೊರಗಿದ್ದಾನೆ. ಕಳೆದ ಎರಡು ತಿಂಗಳಿಂದ ನಗರದ ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾನೆ. ಹೀಗಾಗಿ ಆರೋಪಿಯ ಖರ್ಚು ವೆಚ್ಚದ ಹಣದ ಮೂಲ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಆರೋಪಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.