ಮಂಗಳೂರು: ನಿಶ್ಚಿತಾರ್ಥ ಮುಗಿಸಿಕೊಂಡಿದ್ದ ಯುವ ಜೋಡಿಯೊಂದರ ನಡುವೆ ಮದುವೆಗೆ ಮುನ್ನವೇ ಬಿರುಕು ಬಿಟ್ಟಿದ್ದು, ಯುವಕನ ಹುಚ್ಚಾಟವೇ ಆತನನ್ನು ಪೊಲೀಸ್ ಠಾಣೆ ಏರುವಂತೆ ಮಾಡಿದೆ.
ಯುವತಿಯರಿಗೆ ಮದುವೆ ಬಗ್ಗೆ, ಮದುವೆ ನಂತರದ ಸಾಂಸಾರಿಕ ಜೀವನದ ಬಗ್ಗೆ ಆಕಾಂಕ್ಷೆಗಳಿರುತ್ತವೆ. ಆದರೆ ಹೆಚ್ಚಿನ ಯುವಕರು ಸಾಂಸಾರಿಕವಾಗಿ ತಲೆಕೆಡಿಸಿಕೊಳ್ಳೋದು ಕಡಿಮೆ. ಅವರಿಗೆ ಅತಿಯಾದ ಲೈಂಗಿಕ ಬಯಕೆ ಈಡೇರಿಸಿಕೊಳ್ಳುವ ತವಕವೇ ಹೆಚ್ಚು. ಅದಕ್ಕಾಗಿ ಮದುವೆ ನಿಶ್ಚಿತಾರ್ಥ ಆದಕೂಡಲೇ ಯುವತಿಯ ಜೊತೆಗೆ ಹೊರಗೆ ತಿರುಗಾಡಲು ಬಯಸುತ್ತಾರೆ. ಇದೆಲ್ಲ ಈಗಿನ ಸಂದರ್ಭದಲ್ಲಿ ಸಹಜವೇ. ಆದರೆ, ಇಲ್ಲೊಬ್ಬ ಯುವಕ, ಯುವತಿಯ ನಿಶ್ಚಿತಾರ್ಥ ಆಗುವ ಮೊದಲೇ ಏನೆಲ್ಲಾ ಅಶ್ಲೀಲ ಮೆಸೇಜ್ ಮಾಡಿ ಕೊನೆಗೆ ಪೊಲೀಸ್ ಅತಿಥಿಯಾಗಿದ್ದಾನೆ.
ಇಂತಹ ವಿಚಿತ್ರ ನೈಜ ಘಟನೆ ನಡೆದದ್ದು ಕಡಲನಗರಿ ಮಂಗಳೂರಿನಲ್ಲಿ. ಈಗಿನ ಕಾಲದಲ್ಲಿ ಮನಕ್ಕೊಪ್ಪುವ ಹೆಣ್ಣು ಸಿಗುವುದೇ ಅಪರೂಪ ಎಂಬ ಸ್ಥಿತಿ ಇದ್ದರೂ, ಆತನಿಗೇನೋ ಮದುವೆಗೆ ಹೆಣ್ಣು ನೋಡಿ ಎರಡೂ ಕಡೆಗಳಿಂದ ಒಪ್ಪಿಗೆ ಆಗಿತ್ತು. ಕೊನೆಗೆ, ನಿಶ್ಚಿತಾರ್ಥಕ್ಕೂ ದಿನ ನಿಗದಿ ಆಗಿತ್ತು. ಜಿಎಸ್ ಬಿ ಸಮುದಾಯ ಆಗಿದ್ದರಿಂದ ಸಂಪ್ರದಾಯ ವಿಧಿಗಳೆಲ್ಲ ಇರುವುದರಿಂದ ಎಲ್ಲದಕ್ಕೂ ಕಟ್ಟುಪಾಡುಗಳಿದ್ದವು. ಕಳೆದ ಆಗಸ್ಟ್ 9ರಂದು ನಿಶ್ಚಿತಾರ್ಥಕ್ಕೆ ದಿನ ನಿಗದಿಯಾಗಿತ್ತು.
ಆದರೆ, ಅದಕ್ಕೂ ಮೊದಲೇ ಹುಡುಗಿಯ ಮೊಬೈಲ್ ನಂಬರ್ ಪಡೆದಿದ್ದ ಯುವಕ, ಮೆಸೇಜ್ ಮಾಡಲಾರಂಭಿಸಿದ್ದ. ಇದರ ನಡುವೆ, ಯುವತಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಾ, ತಾನೊಬ್ಬ ಸಲಿಂಗಕಾಮಿ ಎಂದು ಹೇಳಿ ಯುವತಿಯನ್ನೇ ಗಾಬರಿಗೊಳಿಸಿದ್ದಾನೆ. ಈ ರೀತಿಯ ವಿಚಿತ್ರ ಸಂದೇಶಗಳನ್ನು ನೋಡಿ ಗಾಬರಿಗೊಂಡ ಯುವತಿ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಈ ರೀತಿ ವಿಚಿತ್ರವಾಗಿ ವರ್ತಿಸಿದ ವ್ಯಕ್ತಿಯನ್ನು ಕುದ್ರೋಳಿಯ ಅಳಕೆ ನಿವಾಸಿ ಶ್ರೀನಿವಾಸ ಭಟ್ (35) ಎಂದು ಗುರುತಿಸಲಾಗಿದೆ. ಈತನಿಗೆ ಮಂಗಳೂರು ನಗರ ವ್ಯಾಪ್ತಿಯದ್ದೇ ನಿವಾಸಿ ಆಗಿರುವ 28 ವರ್ಷದ ಯುವತಿ ಜೊತೆ ಮದುವೆಗೆ ಮಾತುಕತೆ ನಡೆದಿತ್ತು. ಎರಡೂ ಕುಟುಂಬಗಳ ಒಪ್ಪಿಗೆ ನಡೆದು ನಿಶ್ಚಿತಾರ್ಥಕ್ಕೆ ದಿನ ನಿಗದಿ ಆಗಿತ್ತು. ಆದರೆ ಈ ನಡುವೆ, ಯುವತಿಯ ಜೊತೆಗೆ ಅಶ್ಲೀಲ ಮೆಸೇಜ್ ಹಾಕಿ, ವಿಚಿತ್ರವಾಗಿ ವರ್ತಿಸಿದ್ದಾನೆ. ಯುವತಿಗೆ ಅಶ್ಲೀಲ ಮತ್ತು ಕಾಮಪ್ರಚೋದಕ ಸಂದೇಶಗಳನ್ನು ಕಳುಹಿಸುತ್ತಿದ್ದ. ಅದಲ್ಲದೆ, ಜುಲೈ 22ರಂದು ಮಾತುಕತೆಯ ನಡುವೆ, Then I need to find another wife for 10 pm duty ಎಂದು ಮೆಸೇಜ್ ಹಾಕಿದ್ದ. ವಿಚಿತ್ರ ಸಂದೇಶಗಳನ್ನು ಕಳುಹಿಸುತ್ತಿದ್ದ ಕಾರಣ, ಆಕೆಯ ಕುಟುಂಬಸ್ಥರು ಆಗಸ್ಟ್ 9ರ ನಿಶ್ಚಿತಾರ್ಥ ಕಾರ್ಯವನ್ನು ಏನೋ ಕಾರಣ ನೀಡಿ ಮುಂದಕ್ಕೆ ಹಾಕಿದ್ದರು.
ಇದರ ನಡುವೆಯೂ, ಆತ ಯುವತಿಗೆ ಇಂತಹದ್ದೇ ಅಸಂಬದ್ಧ ಮೆಸೇಜ್ ಗಳನ್ನು ಕಳುಹಿಸುತ್ತಿದ್ದ. ಆಗಸ್ಟ್ 27ರಂದು ಇದೇ ರೀತಿ ಮೆಸೇಜ್ ಮಾಡುತ್ತಾ ತನ್ನ ಬಗ್ಗೆ ಹೊಸ ವಿಚಾರವನ್ನು ಹೇಳಿಕೊಂಡಿದ್ದಾನೆ. ‘ನಿಜ ಹೇಳಬೇಕಂದ್ರೆ ನಾನು ಸಲಿಂಗಕಾಮಿ. ಹಾಗಂತ, ಅದಕ್ಕೇನು ತೊಂದರೆಯಿಲ್ಲ. ಅದು ಒಳ್ಳೆ ವರ್ಕ್ ಆಗತ್ತೆ. ಒಳ್ಳೆದಾಗಿಯೇ ಶೋ ನಡೆಸಬಹುದು’ ಎಂದು ಮೆಸೇಜ್ ಮಾಡಿದ್ದಾನೆ.
ಯುವಕನ ಈ ರೀತಿಯ ವರ್ತನೆಯಿಂದ ಬೇಸತ್ತ ಯುವತಿ ಸೆ.15ರಂದು ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು, ತನಗೆ ಮಾನಸಿಕ ಕಿರುಕುಳ ನೀಡಿರುವ ವ್ಯಕ್ತಿಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದಳು. ಪೊಲೀಸರು ಅ.12ರಂದು ಆರೋಪಿ ಶ್ರೀನಿವಾಸ ಭಟ್ ನನ್ನು ರಥಬೀದಿಯಲ್ಲಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.