ಬೆಂಗಳೂರು : ಕೊರೋನಾ ಭೀತಿಯ ನಡುವೆಯೂ ರಾಜ್ಯಾದ್ಯಂತ 1 ರಿಂದ 12 ನೇ ತರಗತಿಗಳನ್ನು ಆರಂಭಿಸಲಾಗಿದೆ. ರಾಜ್ಯಾದ್ಯಂತ ಇಂದಿನಿಂದ ಅಂಗನವಾಡಿ ಕೇಂದ್ರಗಳು ಹಾಗೂ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರ್ಧ ದಿನ ಭೌತಿಕ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಅಂಗನವಾಡಿ ಕೇಂದ್ರ ಆರಂಭದ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಕೋವಿಡ್-19 ಹಿನ್ನಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಫಲಾನುಭವಿಗಳು ಬರುವುದನ್ನು ನಿರ್ಬಂಧಿಸಲಾಗಿತ್ತು. ಅಲ್ಲದೇ ಫಲಾನುಭವಿಗಳ ಮನೆಗೆ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿತ್ತು.
ರಾಜ್ಯ ಸರ್ಕಾರವು ಪತ್ರದಲ್ಲಿ ಶೇ.2ಕ್ಕಿಂತ ಕಡಿಮೆ ಟಿಪಿಆರ್ ಇರುವ ತಾಲ್ಲೂಕುಗಳಲ್ಲಿ ಕೋವಿಡ್-19 ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಾಗೂ ಲಸಿಕೆ ಪಡೆದಿರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಮೂಲಕ ಸೇವೆಗಳನ್ನು ಒದಗಿಸಲು 2 ಗಂಟೆಗಳ ಕಾಲ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿರುತ್ತದೆ.