Ad Widget .

ಅಡಿಕೆ ಕದ್ದ ನೆಪದಲ್ಲಿ ಬಾಲಕನಿಗೆ ಹಿಗ್ಗಾಮುಗ್ಗ ಹಲ್ಲೆ ಪ್ರಕರಣ| ಆರೋಪಿಗಳಿಗೆ ಜಾಮೀನು ದಯಪಾಲಿಸಿದ ಕೋರ್ಟ್..!

ಪುತ್ತೂರು: ಅಡಿಕೆ ಕದ್ದ ನೆಪದಲ್ಲಿ ಗುತ್ತಿಗಾರಿನ 16 ವರ್ಷದ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಆಕ್ರೋಶ ಕೇಳಿಬಂದಿದ್ದರಿಂದ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಮೊದಲಿಗೆ ಸುಮೊಟೊ ಕೇಸು ದಾಖಲಿಸಿದ್ದರು. ಆನಂತರ, ಸ್ವತಃ ಬಾಲಕನೇ ಹೆತ್ತವರ ಜೊತೆಗೆ ಬಂದು ಠಾಣೆಯಲ್ಲಿ ದೂರು ದಾಖಲಿಸಿದ್ದ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಗುತ್ತಿಗಾರಿನ ಕಡ್ತಲ್ ಕಜೆ ಎಂಬಲ್ಲಿ ಅ.27ರಂದು ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ಹಣ್ಣಡಿಕೆಯನ್ನು ಗೋಣಿಯಲ್ಲಿ ತುಂಬಿಸಿ ಒಯ್ಯುತ್ತಿದ್ದ ಬಾಲಕನನ್ನು, ಆತ ಕದ್ದು ತಂದ ನೆಪದಲ್ಲಿ ಅಡ್ಡಗಟ್ಟಿದ ಯುವಕರು ಹಲ್ಲೆ ನಡೆಸಿದ್ದರು. ಅಲ್ಲದೆ, ದೊಣ್ಣೆಯಲ್ಲಿ ಹಲ್ಲೆ ನಡೆಸಿದ ವಿಡಿಯೋವನ್ನು ಅವರೇ ಮಾಡಿಕೊಂಡು ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಹಲ್ಲೆ ನಡೆಸಿದವರು ಸ್ಥಳೀಯವಾಗಿ ಸಂಘಟನೆಯಲ್ಲಿ ಗುರುತಿಸಿಕೊಂಡವರಾಗಿದ್ದು, ಅಡಿಕೆ ಕದ್ದ ಬಾಲಕನಿಗೆ ಗೂಸಾ ನೀಡಿದ್ದಾಗಿ ವಿಡಿಯೋ ಹಂಚಿದ್ದರು.

Ad Widget . Ad Widget . Ad Widget .

ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕರು ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಕೇಸು ದಾಖಲಾಗಿದ್ದರೂ, ಪೊಲೀಸರು ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಿರಲಿಲ್ಲ. ಜೀವನ್, ವರ್ಷಿತ್, ಸಚಿನ್, ಮೋಕ್ಷಿತ್, ಸನತ್, ಮುರಳಿ, ಎಂ.ಪಿ.ದಿನೇಶ್, ಈಶ್ವರ, ಚಂದ್ರ, ಚೇತನ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಹಲವರು ವಿವಿಧ ಸಂಘಟನೆಗಳ ಕಾರ್ಯಕರ್ತರಾಗಿದ್ದು, ಗುತ್ತಿಗಾರು ಪೇಟೆಯಲ್ಲಿ ತಿರುಗಾಡಿಕೊಂಡಿದ್ದರೂ, ವಶಕ್ಕೆ ಪಡೆದು ವಿಚಾರಣೆ ನಡೆಸುವುದಕ್ಕೂ ಪೊಲೀಸರು ಮುಂದಾಗಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದರು.

ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು ಶನಿವಾರ ಆರೋಪಿಗಳು ಸುಳ್ಯ ಕೋರ್ಟಿಗೆ ರಾಜಾರೋಷದಿಂದ ಹಾಜರಾಗಿ ಜಾಮೀನು ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಟೇಶನ್ ಜಾಮೀನು ಆಗಬಲ್ಲ ಸೆಕ್ಷನ್ ಗಳನ್ನೇ ಎಫ್ಐಆರ್ ನಲ್ಲಿ ವಿಧಿಸಿದ್ದರಿಂದ ಸಹಜವಾಗೇ ಜಾಮೀನು ಆಗಿದೆ ಎನ್ನಲಾಗುತ್ತಿದೆ. ನೈತಿಕ ಪೊಲೀಸ್ ಗಿರಿ ನಡೆಸಿರುವ ರೀತಿಯಲ್ಲೇ ಕೃತ್ಯ ನಡೆದಿದ್ದಲ್ಲದೆ, ಘಟನೆ ಬಗ್ಗೆ ವಿಡಿಯೋ ಸಾಕ್ಷ್ಯ ಇದ್ದರೂ, ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದ್ದ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ತಾಳಿದ್ದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಗಳು ಜನರಲ್ಲಿ ಉಂಟಾಗಿದೆ.

ವಿಡಿಯೋದಲ್ಲಿ ಬಾಲಕ ನಾನು ಅಡಿಕೆ ಕದ್ದಿಲ್ಲ ಎಂದು ಅಂಗಲಾಚುತ್ತಿದ್ದರೂ, ಆತನ ಬಳಿ ಒತ್ತಾಯಪೂರ್ವಕವಾಗಿ ಹೇಳೆಂದು ಬೆದರಿಸುತ್ತಿರುವುದು ಕೂಡ ಗೊತ್ತಾಗುತ್ತದೆ. ಒಂದು ವೇಳೆ ಆತ ಕದ್ದಿದ್ದೇ ಹೌದಾದರೆ ಕಾನೂನು ಕ್ರಮಕ್ಕೆ ಇಲಾಖೆಗಳಿವೆ. ನಡುರಸ್ತೆಯಲ್ಲಿ ಆತನನ್ನು ಬೆದರಿಸಲು ಕಾನೂನು ಕೈಗೆ ಕೊಟ್ಟವರು ಯಾರೆಂಬ ಪ್ರಶ್ನೆ ಸಾರ್ವಜನಿಕರದ್ದು. ಒಟ್ಟಾರೆ ಪ್ರಕರಣ ಕುರಿತಂತೆ ಕೋರ್ಟ್ ಜಾಮೀನು ನೀಡಿದ್ದು, ಇನ್ನೇನು ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.

Leave a Comment

Your email address will not be published. Required fields are marked *