ಮಂಗಳೂರು: ಕಳೆದ ಮೂರು ತಿಂಗಳಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಸರಣಿಯಂತೆ ನಡೆಯುತ್ತಿದ್ದ ಸರಗಳ್ಳತನ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಉರ್ವಾ, ಕದ್ರಿ ಮತ್ತು ಕಾವೂರು ಠಾಣೆ ವ್ಯಾಪ್ತಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಯಿಂದ ಸರ ಕಿತ್ತು ಪರಾರಿಯಾಗುತ್ತಿದ್ದ ಬಗ್ಗೆ 15ಕ್ಕೂ ಹೆಚ್ಚು ದೂರು ದಾಖಲಾಗಿತ್ತು. ಈ ಬಗ್ಗೆ ತುಂಬ ತಲೆಕೆಡಿಸಿಕೊಂಡಿದ್ದ ಪೊಲೀಸ್ ಕಮಿಷನರ್ ಶಶಿಕುಮಾರ್, ಎಲ್ಲ ಠಾಣೆಗಳ ಇನ್ ಸ್ಪೆಕ್ಟರ್ ಮತ್ತು ಅದಕ್ಕೂ ಮೇಲಿನ ಅಧಿಕಾರಿಗಳನ್ನು ಕರೆದು ಟಾಸ್ಕ್ ಕೊಟ್ಟಿದ್ದರು. ರಾತ್ರಿ – ಹಗಲೆನ್ನದೆ ಒಂದು ತಿಂಗಳ ಕಾಲ ನಿದ್ದೆಯಿಲ್ಲದೆ ನಡೆಸಿದ ಕಾರ್ಯಾಚರಣೆ ಫಲ ಸಿಕ್ಕಿದ್ದು, ಏಳು ಮಂದಿ ಖದೀಮರನ್ನು ಬಂಧಿಸಿದ್ದಾರೆ.
ಕಾವೂರಿನ ಕೆಐಒಸಿಎಲ್ ಕ್ವಾಟ್ರಸ್ ಬಳಿಯ ನಿವಾಸಿ ಅಬ್ದುಲ್ ಇಶಾಮ್ (26) ತಂಡದ ಪ್ರಮುಖ ಆರೋಪಿ. ಉಳಿದಂತೆ, ಮೊಹಮ್ಮದ್ ತೌಸೀಫ್ (30), ಪಂಜಿಮೊಗರಿನ ಸಫ್ವಾನ್(29), ಅಬ್ದುಲ್ ಖಾದರ್ ಸಿನಾನ್ (30), ಸುರತ್ಕಲ್ ಚೊಕ್ಕಬೆಟ್ಟಿನ ಅರ್ಷದ್ (34), ಮಲ್ಲೂರು ನಿವಾಸಿ ಮೊಹಮ್ಮದ್ ಫಜಲ್(32), ಕುಂದಾಪುರದ ಮೂಡುಗೋಪಾಡಿ ನಿವಾಸಿ ಮುಜಾಹಿದ್ ರೆಹಮಾನ್(23) ಬಂಧಿತರು. ಬಜ್ಪೆ, ಬಂದರು, ಬರ್ಕೆ, ಕಾವೂರು, ಉರ್ವಾ, ಕದ್ರಿ, ಕಂಕನಾಡಿ ಮತ್ತು ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 13 ಸರಕಳವು, 5 ಕಡೆ ಸರಕಳವಿಗೆ ಯತ್ನ, ಮೂರು ದ್ವಿಚಕ್ರ ವಾಹನ ಕಳವು, ಎರಡು ದರೋಡೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಒಂದು ಘಟನೆ ಸೇರಿ ಒಟ್ಟು 24 ಪ್ರಕರಣಗಳಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ಕಂಡುಬಂದಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಅತ್ಯಂತ ವ್ಯವಸ್ಥಿತವಾಗಿ ಸರಕಳವು ಪ್ರಕರಣವನ್ನು ನಡೆಸುತ್ತಿದ್ದರು. ಒಂದು ಕಡೆ ಬೈಕ್ ಅಥವಾ ಸ್ಕೂಟರನ್ನು ಕದ್ದು ಅದರಲ್ಲಿ ನಿಗದಿತ ಜಾಗಕ್ಕೆ ತೆರಳಿ, ಒಬ್ಬಾತ ಕೃತ್ಯ ಎಸಗುತ್ತಿದ್ದ. ಆನಂತರ, ಅದೇ ವಾಹನದಲ್ಲಿ ಮತ್ತೊಂದು ಕಡೆಗೆ ತೆರಳಿ ಅಲ್ಲಿ ಕದ್ದ ವಾಹನವನ್ನು ಬಿಡುತ್ತಿದ್ದ. ಅಲ್ಲಿ ಇನ್ನೊಬ್ಬ ವ್ಯಕ್ತಿ ಆರೋಪಿಯನ್ನು ಕರೆದೊಯ್ಯಲು ಮೊದಲೇ ರೆಡಿಯಾಗಿರುತ್ತಿದ್ದ. ಈ ವೇಳೆ, ಕೃತ್ಯ ಎಸಗಿದ ವ್ಯಕ್ತಿ ಶರ್ಟ್ ಬದಲಿಸಿ ಅಥವಾ ಅದರ ಮೇಲೊಂದು ಜಾಕೆಟ್ ಹಾಕಿಕೊಂಡು ಪರಾರಿಯಾಗುತ್ತಿದ್ದರು. ಕೃತ್ಯದ ಸಂದರ್ಭದಲ್ಲಿ ಮೊಬೈಲ್ ಬಳಸುತ್ತಿರಲಿಲ್ಲ. ಅಲ್ಲದೆ, ಸಿಸಿಟಿವಿ ಇದೆಯೇ ಎನ್ನುವ ಬಗ್ಗೆ ನಿಗಾ ವಹಿಸುತ್ತಿದ್ದರು. ಸಿಸಿಟಿವಿ ಇಲ್ಲದ ಜಾಗದಲ್ಲಿಯೇ ಹೆಚ್ಚಾಗಿ ಸರಕಳವು ನಡೆಸುತ್ತಿದ್ದರು. ಉರ್ವಾ, ಬಿಜೈ ಈ ಭಾಗದಲ್ಲಿ ಸರಕಳವು ಕೃತ್ಯ ಎಸಗಿ ಒಳದಾರಿಯಿಂದ ಹೆದ್ದಾರಿಗೆ ಬರುತ್ತಿದ್ದರು. ಹೆದ್ದಾರಿಯಲ್ಲಿ ಸಿಸಿಟಿವಿ ಇಲ್ಲದೇ ಇರುವ ಕಾರಣ ಸುಲಭದಲ್ಲಿ ಪರಾರಿಯಾಗುತ್ತಿದ್ದರು.
ಉಳ್ಳಾಲದಲ್ಲಿ ಸ್ಕೂಟರ್ ಕದ್ದು ಕದ್ರಿಯಲ್ಲಿ ಕೃತ್ಯ
ಉರ್ವಾ, ಕೊಟ್ಟಾರ, ಕಾವೂರು ವ್ಯಾಪ್ತಿಯಲ್ಲಿ ಕಳೆದ ಆಗಸ್ಟ್, ಸೆಪ್ಟಂಬರ್ ನಲ್ಲಿ ಸರಣಿಯಂತೆ ಕೃತ್ಯ ನಡೆದಿದ್ದರೂ, ಪೊಲೀಸರಿಗೆ ಟ್ರೇಸ್ ಮಾಡಲು ಸಾಧ್ಯವಾಗಿರಲಿಲ್ಲ. ಆಗಸ್ಟ್ 26ರಂದು ಉಳ್ಳಾಲದ ಅಡ್ಕ ಬಜಾರ್ ಎಂಬಲ್ಲಿ ನಿಲ್ಲಿಸಿದ್ದ ನೀಲಿ ಬಣ್ಣದ ಸ್ಕೂಟರನ್ನು ಕದ್ದುಕೊಂಡು ಹೋಗಿ ಅದೇ ದಿನ ರಾತ್ರಿ 7.30 ಗಂಟೆಗೆ ಕದ್ರಿಯ ಪಾಂಡುರಂಗ ಭಜನಾ ಮಂದಿರದ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಸರವನ್ನು ಕಿತ್ತು ಕಳ್ಳ ಪರಾರಿಯಾಗಿದ್ದ. ಆನಂತರ, ಅದೇ ದಿನ ರಾತ್ರಿ ಕಾವೂರು ಠಾಣೆ ವ್ಯಾಪ್ತಿಯ ಕನ್ನಿಕಾ ದೇವಸ್ಥಾನದ ಬಳಿ ಮಹಿಳೆಯ ಚಿನ್ನದ ಸರವನ್ನು ಕೀಳಲಾಗಿತ್ತು. ಈ ಎರಡೂ ಪ್ರಕರಣದಲ್ಲಿ ಕದ್ದೊಯ್ದಿದ್ದ ನೀಲಿ ಬಣ್ಣದ ಸ್ಕೂಟರ್ ಬಳಕೆಯಾಗಿತ್ತು.
ಆಗಸ್ಟ್ 27ರಂದು ರಾತ್ರಿ 7.30ಕ್ಕೆ ಲೇಡಿಹಿಲ್ ಬಸ್ ನಿಲ್ದಾಣದ ಬಳಿ ಫೋನಲ್ಲಿ ಮಾತನಾಡುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಿತ್ತು ಸ್ಕೂಟರಿನಲ್ಲಿ ಪರಾರಿಯಾಗಿದ್ದ. ಅದೇ ರಾತ್ರಿ 8.20ಕ್ಕೆ ಚಿಲಿಂಬಿಯಲ್ಲಿ ಮನೆ ಗೇಟ್ ಹಾಕುತ್ತಿದ್ದ ಮಹಿಳೆಯೊಬ್ಬರಲ್ಲಿ ವಿಳಾಸ ಕೇಳುವ ನೆಪದಲ್ಲಿ ಆಕೆಯ ಚಿನ್ನದ ಸರವನ್ನು ಆಗಂತುಕ ಕಿತ್ತು ಪರಾರಿಯಾಗಿದ್ದ. ಅದೇ ರಾತ್ರಿಯಲ್ಲಿ ಉರ್ವಾ ಬಳಿಯ ದಡ್ಡಲ್ ಕಾಡು, ಮಾಲೆಮಾರ್ ನಾಗಕನ್ನಿಕಾ ದೇವಸ್ಥಾನಕ್ಕೆ ತೆರಳಿ ಹಿಂತಿರುಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಸರವನ್ನು ಕೀಳಲಾಗಿತ್ತು. ಆನಂತರ, ಸೆಪ್ಟಂಬರ್ 8ರಂದು ಸಂಜೆ 7.40ಕ್ಕೆ ಕದ್ರಿಯ ಜಿಮ್ಮಿ ಸೂಪರ್ ಮಾರ್ಕೆಟ್ ಬಳಿ ಕಪ್ಪು ಬಣ್ಣದ ಸ್ಕೂಟರಿನಲ್ಲಿ ಬಂದಿದ್ದ ವ್ಯಕ್ತಿ ಮಹಿಳೆಯ ಕುತ್ತಿಗೆಯಿಂದ ಸರ ಕದಿಯಲು ಯತ್ನಿಸಿದ್ದ. ಅದೇ ದಿನ ರಾತ್ರಿ 8 ಗಂಟೆಗೆ ನಂತೂರು ಸಂದೇಶ ಹಾಲ್ ಬಳಿ ನಡೆದುಹೋಗುತ್ತಿದ್ದ ಮಹಿಳೆಯಿಂದ ಸರವನ್ನು ಕೀಳಲು ಪ್ರಯತ್ನ ನಡೆದಿತ್ತು.
ಕುಂಟಿಕಾನದಲ್ಲಿ ಕದ್ದ ಸ್ಕೂಟರಿನಲ್ಲಿ ಕಾವೂರಲ್ಲಿ ಕಳವು
ಸೆ.23ರಂದು ಕುಂಟಿಕಾನದಲ್ಲಿ ನಿಲ್ಲಿಸಿದ್ದ ಸಿಲ್ವರ್ ಬಣ್ಣದ ಸ್ಕೂಟರನ್ನು ತಂಡ ಕಳವು ಮಾಡಿತ್ತು. ಅದೇ ದಿನ ಕಾವೂರಿನ ಮೌಂಟ್ ಕಾರ್ಮೆಲ್ ಶಾಲೆಯ ಬಳಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕದಿಯುವ ಯತ್ನ ನಡೆದಿತ್ತು. ಅದೇ ರಾತ್ರಿ ಕಾವೂರಿನ ಮುಲ್ಲಕಾಡು ಬಳಿ ಸ್ಕೂಟರಿನಲ್ಲಿ ಬಂದಿದ್ದ ವ್ಯಕ್ತಿ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ. ಎರಡು ಕೃತ್ಯಕ್ಕೂ ಒಂದೇ ಸ್ಕೂಟರ್ ಬಳಕೆಯಾಗಿತ್ತು. ಅ.10ರಂದು ಡೊಂಗರಕೇರಿ ದೇವಸ್ಥಾನದ ಬಳಿ ನಡೆದುಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಸರವನ್ನು ಕಿತ್ತು ಸ್ಕೂಟರಿನಲ್ಲಿ ಆಗಂತುಕ ಪರಾರಿಯಾಗಿದ್ದ.
ಒಂದೇ ದಿನ ಕಾವೂರು, ಉರ್ವಾದಲ್ಲಿ ಸರಕಳವು
ಅ.13ರಂದು ಕುಂಟಿಕಾನ ಫ್ಲೈಓವರ್ ಅಡಿಯಲ್ಲಿ ನಿಲ್ಲಿಸಿದ್ದ ಸ್ಪ್ಲೆಂಡರ್ ಬೈಕನ್ನು ಕಳವುಗೈದು ಅದೇ ದಿನ ಕಾವೂರಿನ ನಾಗಕನ್ನಿಕಾ ದೇವಸ್ಥಾನದ ಬಳಿ ಮಹಿಳೆಯ ಸರ ಕೀಳುವ ಯತ್ನ ನಡೆದಿತ್ತು. ಅ.15ರಂದು ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಮಹಿಳೆಯ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ. ಅದೇ ದಿನ ಉರ್ವಾ ಚಿಲಿಂಬಿಯಲ್ಲಿ ಸ್ಕೂಟರಿನಲ್ಲಿ ತೆರಳುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದೊಯ್ದು ಸ್ಕೂಟರಿನಲ್ಲಿ ಬಂದ ವ್ಯಕ್ತಿ ಪರಾರಿಯಾಗಿದ್ದ. ಅ.27ರಂದು ರಾತ್ರಿ 2 ಗಂಟೆಗೆ ಕದ್ರಿ ನ್ಯೂ ರೋಡ್ ನಲ್ಲಿ ಕೆಲಸ ಮುಗಿಸಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬೆದರಿಸಿ, ಆತನ ಸ್ಕೂಟರ್ ಮತ್ತು ಮೊಬೈಲನ್ನು ಕಿತ್ತು ತಂಡ ಪರಾರಿಯಾಗಿತ್ತು. ಅದೇ ರಾತ್ರಿಯಲ್ಲಿ ನಸುಕಿನ 4 ಗಂಟೆಗೆ ಕುಂಟಿಕಾನ ಫ್ಲೈಓವರ್ ಬಳಿ ಸ್ಕೂಟರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಪೆಟ್ರೋಲ್ ಖಾಲಿಯಾಗಿದೆ ಎಂದು ತಡೆದು ಆತನ ಸ್ಕೂಟರ್ ಮತ್ತು ಮೊಬೈಲ್ ಕಿತ್ತುಕೊಂಡು ತಂಡ ಪರಾರಿಯಾಗಿತ್ತು. ಅದೇ ರಾತ್ರಿ ಅ.27ರಂದು ಶಕ್ತಿನಗರದಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಕಾವೂರು ಎಎಸ್ಐ ಜಗದೀಶ್ ಮತ್ತು ಎಚ್ ಸಿ ಮಂಜುನಾಥ ಹೆಗ್ಡೆ ಅವರು ನಿಲ್ಲಿಸಲು ಸೂಚಿಸಿದರೂ ಸ್ಕೂಟರಿನಲ್ಲಿ ಡಿಕ್ಕಿಯಾಗಿಸಿ ಇಬ್ಬರು ಪರಾರಿಯಾಗಿದ್ದರು. ಇವೆಲ್ಲ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳ ಪಾತ್ರ ಕಂಡುಬಂದಿದ್ದು, ಕೃತ್ಯಕ್ಕೆ ಬಳಸಿದ್ದ ಆರು ದ್ವಿಚಕ್ರ ವಾಹನ, ಕದ್ದೊಯ್ದ 10 ಲಕ್ಷ ಮೌಲ್ಯದ 210 ಗ್ರಾಮ್ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಬಂಟ್ವಾಳದ ಜುವೆಲ್ಲರಿಯಲ್ಲಿ ಚಿನ್ನ ಮಾರುತ್ತಿದ್ದರು
ಆರೋಪಿಗಳು ಬಂಟ್ವಾಳ ಪೇಟೆಯ ನಿಗದಿತ ಮೂರು ಜುವೆಲ್ಲರಿಗಳಲ್ಲಿ ಕದ್ದ ಚಿನ್ನವನ್ನು ಕಡಿಮೆ ಕ್ರಯಕ್ಕೆ ಮಾರಾಟ ಮಾಡುತ್ತಿದ್ದರು. ಜುವೆಲ್ಲರಿಯವರಿಗೆ ಕದ್ದು ತಂದ ಚಿನ್ನ ಎಂದು ತಿಳಿದಿದ್ದರೂ, ಕಡಿಮೆ ದರಕ್ಕೆ ಖರೀದಿಸುತ್ತಿದ್ದರು. ಹಾಗಾಗಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಪ್ರಮುಖ ಆರೋಪಿ ಕಾವೂರಿನ ಅಬ್ದುಲ್ ಇಶಾಮ್ ವಿರುದ್ಧ ಕಳೆದ ಹತ್ತು ವರ್ಷಗಳಲ್ಲಿ ಈಗಿನ ಪ್ರಕರಣ ಹೊರತುಪಡಿಸಿ 22 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಕಳೆದ ಬಾರಿ ಸಿಎಎ ಗಲಾಟೆ ಸಂದರ್ಭದಲ್ಲಿ ದೊಂಬಿಯಲ್ಲಿ ಪಾಲ್ಗೊಂಡಿದ್ದ. ಒಟ್ಟು 30ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಮೊಹಮ್ಮದ್ ಫಜಲ್, ಈ ಹಿಂದೆ ಫರಂಗಿಪೇಟೆಯ ಜಿಯಾ ಮತ್ತು ಪರ್ವೇಜ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಕಂಕನಾಡಿ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ದರೋಡೆ, ಗಲಾಟೆ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಎಂದು ಪೊಲೀಸ್ ಕಮಿಷನರ್ ವಿವರಿಸಿದ್ದಾರೆ.
ಮೊದಲಿಗೆ, ಬಜ್ಪೆ ಇನ್ ಸ್ಪೆಕ್ಟರ್ ಸಂದೇಶ್ ಪಿ.ಜಿ. ರಾತ್ರಿ ಗಸ್ತಿನಲ್ಲಿದ್ದಾಗ ಪ್ರಮುಖ ಆರೋಪಿ ಅಬ್ದುಲ್ ಇಶಾಮ್ ನನ್ನು ಗುಮಾನಿ ಮೇಲೆ ವಶಕ್ಕೆ ಪಡೆದಿದ್ದರು. ಆನಂತರ, ಆತನ ಬಾಯಿಬಿಡಿಸಿದಾಗ ಕೃತ್ಯದ ಹೂರಣ ಹೊರಬಿದ್ದಿದೆ. ಒಂದು ತಿಂಗಳ ಕಾಲ ಬಹಳ ಶ್ರಮಪಟ್ಟು ಕದ್ರಿ, ಉರ್ವಾ ಮತ್ತು ಬಜ್ಪೆ ಠಾಣೆ ಪೊಲೀಸರು ಆರೋಪಿಗಳನ್ನು ಹಿಡಿದಿದ್ದಾರೆ. ಬಜ್ಪೆ ಇನ್ ಸ್ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದ ತಂಡ ಕಳೆದ ಬಾರಿ ಕಾವೂರಿನಲ್ಲಿ ಯಾವುದೇ ಕುರುಹು ಇಲ್ಲದ ಹಿಂದು ಕಾರ್ಯಕರ್ತನ ಕೊಲೆಯತ್ನ ಪ್ರಕರಣವನ್ನೂ ಪತ್ತೆಹಚ್ಚಲು ಯಶಸ್ವಿಯಾಗಿತ್ತು. ಕಾರ್ಯಾಚರಣೆ ನಡೆಸಿದ ಒಟ್ಟು ತಂಡಕ್ಕೆ ಕಮಿಷನರ್ ಶಶಿಕುಮಾರ್, 25 ಸಾವಿರ ರೂ. ನಗದು ಬಹುಮಾನ ನೀಡಿದ್ದಾರೆ.