ಮಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಬಂಧನಕ್ಕೀಡಾಗಿರುವ ಅಂಡರ್ ವರ್ಲ್ಡ್ ಡಾನ್ ಸುರೇಶ ಪುಜಾರಿಯ ಬಂಟ ಪ್ರವೀಣ್ ಕುಮಾರ್ ಎಂಬತಾನನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಮುಂಬೈನಲ್ಲಿ ಛೋಟಾ ರಾಜನ್, ಆಬಳಿಕ ರವಿ ಪೂಜಾರಿ ಜೊತೆಗೆ ಖಾಸಾ ಬಂಟನಾಗಿ ಗುರುತಿಸಲ್ಪಟ್ಟಿದ್ದ ಸುರೇಶ ಪೂಜಾರಿ ಆನಂತರ ತಾನೇ ಅಂಡರ್ ವರ್ಲ್ಡ್ ಡಾನ್ ಎಂದು ಹೇಳಿ ವಿದೇಶದಲ್ಲಿದ್ದುಕೊಂಡು ಮುಂಬೈನಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದ. ಈತನ ವಿರುದ್ಧ ಹಲವಾರು ಪ್ರಕರಣಗಳು ಮುಂಬೈ ಮತ್ತು ಥಾಣೆಯಲ್ಲಿ ದಾಖಲಾಗಿದ್ದವು. ಈತನ ಸಹಚರರ ಮೂಲಕ ಬೆದರಿಸಿ ಹಣ ಕೀಳುತ್ತಿದ್ದ. ತನ್ನ ಕೃತ್ಯಕ್ಕೆ ಮೂಡುಬಿದ್ರೆಯ ಪ್ರವೀಣ್ ಕುಮಾರ್ ಸೇರಿದಂತೆ ಹಲವರನ್ನು ಬಳಸುತ್ತಿದ್ದ. ಹೊಟೇಲ್ ಉದ್ಯಮಿಯ ಮೇಲೆ ಬೆದರಿಕೆ ಕರೆ ಮಾಡಿ ಹಣ ಕೇಳಿದ್ದ ಪ್ರಕರಣದಲ್ಲಿ ಪ್ರವೀಣ್ ಕುಮಾರ್ ಎರಡನೇ ಆರೋಪಿಯಾಗಿದ್ದ. 2020 ರ ಜನವರಿ 15 ರಿಂದ 22 ರ ಮಧ್ಯೆ ಸುರೇಶ್ ಪೂಜಾರಿ ಹಲವಾರು ಬಾರಿ ಕರೆ ಮಾಡಿ ಉದ್ಯಮಿಗೆ ಬೆದರಿಸಿದ್ದಲ್ಲದೆ, ಮೂರು ಲಕ್ಷ ರೂ. ನೀಡುವಂತೆ ಪೀಡಿಸಿದ್ದ ಬಗ್ಗೆ ಮುಂಬೈನಲ್ಲಿ ಪ್ರಕರಣ ದಾಖಲಾಗಿತ್ತು.
ಅಲ್ಲದೆ, ಪ್ರವೀಣ್ ಕುಮಾರ್ ಎಂಬಾತನ ಎಸ್‌ಬಿಐ ಬ್ಯಾಂಕ್ ಖಾತೆಗೆ ಹಣ ಹಾಕುವಂತೆ ಸುರೇಶ್ ಪೂಜಾರಿ ಹೇಳಿದ್ದು ಬ್ಯಾಂಕ್ ಖಾತೆಯ ನಂಬರನ್ನೂ ನೀಡಿದ್ದ. ಬಳಿಕ ಭಯಗೊಂಡ ದೂರುದಾರ 49 ಸಾವಿರ ರೂ.ವನ್ನು ಆ ಖಾತೆಗೆ ಹಾಕಿದ್ದ. ಪ್ರಕರಣದ ಬಗ್ಗೆ ಮುಂಬೈ ಸಿಐಡಿ ತಂಡ ತನಿಖೆ ನಡೆಸಿದ್ದು ಆರೋಪಿ ಪ್ರವೀಣ್ ಕುಮಾರ್ ಬಂಧನಕ್ಕೆ ಶೋಧ ನಡೆಸಿತ್ತು. ಆದರೆ ಅಂಡರ್ ವರ್ಲ್ಡ್ ಸಂಪರ್ಕ ಹೊಂದಿದ್ದ ಪ್ರವೀಣ್ ಕುಮಾರ್ ತನ್ನ ಊರು ಮೂಡುಬಿದ್ರೆಯಲ್ಲಿ ಬಂದು ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನಲೆ ಮುಂಬೈ ಸಿಐಡಿ ಪೊಲೀಸರು ಮೂಡುಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿದ್ದು ಬಂಧನ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದರು.
ಅದಲ್ಲದೆ ಮುಂಬೈ ಪೊಲೀಸರು ಎರಡು ಬಾರಿ ಆತನನ್ನು ಬಂಧಿಸಲು ಮೂಡುಬಿದ್ರೆಗೆ ಬಂದು ಕಾರ್ಯಾಚರಣೆ ನಡೆಸಿದ್ದಾಗ ಪ್ರವೀಣ್ ಕುಮಾರ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ.
ಇದೀಗ ನ.01 ರಂದು ಪ್ರವೀಣ್ ಕುಮಾರ್ ಮೂಡುಬಿದ್ರೆಯ ಕೋಟೆಬಾಗಿಲಿನ ತನ್ನ ಮನೆಯಲ್ಲಿರು ವಿಷಯ ತಿಳಿದು ಮೂಡುಬಿದ್ರೆ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆಯಲು ತೆರಳಿದ್ದರು. ಈ ವೇಳೆ, ಪೊಲೀಸರನ್ನು ಕೆಳಕ್ಕೆ ದೂಡಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆನಂತರ ಎಸ್‌ಐ ಸುದೀಪ್ ನೇತೃತ್ವದಲ್ಲಿ ಪೊಲೀಸರು ಬೆನ್ನಟ್ಟಿ ಹಿಡಿದಿದ್ದು ಬಂಧಿಸಿದ್ದಾರೆ. ಬಳಿಕ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಕೇಸು ದಾಖಲಿಸಿದ್ದಾರೆ.