ದುಬೈ: ಟಾಸ್ ಸೋಲು, ಕಳಪೆ ಬ್ಯಾಟಿಂಗ್ ಕಾರಣದಿಂದ ಟೀಮ್ ಇಂಡಿಯಾ ಮತ್ತೊಂದು ಹೀನಾಯ ಸೋಲು ಅಪ್ಪಿತು.
ದುಬೈ ಇಂಟರ್ನ್ಯಾಷನಲ್ ಗ್ರೌಂಡ್ನಲ್ಲಿ ಅ. 24ರಂದು ಪಾಕಿಸ್ತಾನ ವಿರುದ್ಧ ಇವೇ ಕಾರಣದಿಂದ ಭಾರೀ ಸೋಲನುಭವಿಸಿದ್ದ ಭಾರತ ತಂಡ ಇಂದು ಅದೇ ಪಿಚ್ನಲ್ಲಿ ನ್ಯೂಜಿಲೆಂಡ್ ಎದುರು ಇನ್ನೂ ಹೀನಾಯ ಸೋಲುಂಡಿತು. ನ್ಯೂಜಿಲೆಂಡ್ ತಂಡ 8 ವಿಕೆಟ್ಗಳಿಂದ ಭಾರತವನ್ನು ಪರಾಭವಗೊಳಿಸಿತು. ಟಿ20 ವಿಶ್ವಕಪ್ನ ಎರಡನೇ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಭಾರತ ಕೇವಲ 110 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್ 33 ಎಸೆತ ಬಾರಿ ಇರುವಂತೆ ಭರ್ಜರಿ ಜಯಭೇರಿ ಭಾರಿಸಿತು. ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಸೋತಿದ್ದ ನ್ಯೂಜಿಲೆಂಡ್ಗೆ ಇದು ಟೂರ್ನಿಯಲ್ಲಿ ಮೊದಲ ಗೆಲುವು.
ಭಾರತ ಈ ಪಂದ್ಯದಲ್ಲಿ ಎರಡು ಬದಲಾವಣೆ ಮಾಡಿತು. ಸೂರ್ಯಕುಮಾರ್ ಅವರಿಗೆ ಗಾಯದ ಸಮಸ್ಯೆಯಾದ್ದರಿಂದ ಇಶಾನ್ ಕಿಶನ್ ಅವರನ್ನ ಆಡಿಸಲಾಯಿತು. ಭುವನೇಶ್ವರ್ ಕುಮಾರ್ ಬದಲು ಶಾರ್ದೂಲ್ ಠಾಕೂರ್ಗೆ ಅವಕಾಶ ಕೊಡಲಾಯಿತು. ಈ ಎರಡೂ ಬದಲಾವಣೆಗಳಿಂದ ಭಾರತಕ್ಕೆ ತೃಣಮಾತ್ರವೂ ವರ್ಕೌಟ್ ಆಗಲಿಲ್ಲ. ಇಶಾನ್ ಕಿಶನ್ ಕೇವಲ 4 ರನ್ಗೆ ಔಟ್ ಆದರು. ಶಾರ್ದೂಲ್ ಠಾಕೂರ್ ಹಾಕಿದ 9 ಎಸೆತದಲ್ಲಿ 17 ರನ್ನಿತ್ತು ದುಬಾರಿ ಎನಿಸಿದರು. ಬ್ಯಾಟಿಂಗ್ನಲ್ಲೂ ಅವರಿಂದ ಬಂದದ್ದು ಸೊನ್ನೆ ರನ್.
ಈ ಸೋಲಿನೊಂದಿಗೆ ಭಾರತಕ್ಕೆ ಸೆಮಿಫೈನಲ್ ಸಾಧ್ಯತೆ ಕ್ಷೀಣಿಸಿದೆ. ಸತತ ಎರಡು ಪಂದ್ಯ ಸೋತಿರುವ ಭಾರತ ಈಗ ಉಳಿದಿರುವ ಎಲ್ಲಾ ಮೂರು ಪಂದ್ಯಗಳನ್ನ ಗೆಲ್ಲುವುದು ಅನಿವಾರ್ಯವಾಗಿದೆ. ಒಂದು ವೇಳೆ ಗೆದ್ದರೂ ಸೆಮಿಫೈನಲ್ ಪ್ರವೇಶ ಖಚಿತ ಎಂದು ಹೇಳಲು ಅಸಾಧ್ಯ. ಬೇರೆ ಪಂದ್ಯಗಳ ಫಲಿತಾಂಶದ ಮೇಲೆ ಭಾರತದ ಹಣೆಬರಹ ನಿರ್ಧಾರವಾಗುತ್ತದೆ.