ದೆಹಲಿ: ಸತತ ಐದನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಇದರಿಂದ ದೇಶಾದ್ಯಂತ ತೈಲ ಬೆಲೆ ದಾಖಲೆ ಮಟ್ಟ ತಲುಪಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಭಾನುವಾರ (ಅ.31) ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಿವೆ. ಇಂದು ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 35 ಪೈಸೆ ಏರಿಕೆ ಆಗಿದೆ.
ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಈಗಾಗಲೇ ಬಸವಳಿದಿರುವ ಜನಸಾಮಾನ್ಯರ ಮೇಲೆ ದೀಪಾವಳಿ ಹಬ್ಬದ ವೇಳೆ ಇನ್ನೊಂದು ಬರೆ ಎಳೆಯಲು ಕೇಂದ್ರ ಸರಕಾರ ಮುಂದಾಗಿದೆ. ಅಧಿಕೃತ ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತಷ್ಟು ಏರಿಕೆಯಾಗಲಿದ್ದು 1,000 ರೂ. ಸನಿಹಕ್ಕೆ ತಲುಪಲಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ 100 ರೂ. ಹೆಚ್ಚಿಸುವ ಕುರಿತಾಗಿನ ಪ್ರಸ್ತಾವನೆಯನ್ನು ತೈಲ ಕಂಪೆನಿಗಳು ಕೇಂದ್ರ ಸರಕಾರದ ಮುಂದೆ ಇರಿಸಿದ್ದು ಸರಕಾರ ಇದಕ್ಕೆ ಸಮ್ಮತಿಸಿದಲ್ಲಿ ಎಲ್‌ಪಿಜಿ ಸಹಸ್ರ ರೂ.ಗಳ ಗಡಿ ದಾಟಲಿರುವುದು ನಿಶ್ಚಿತ. ಇದೇ ವೇಳೆ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕೂಡ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ.
ಇಂದು ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 109.34 ರೂಪಾಯಿ ಹಾಗೂ ಲೀಟರ್ ಡೀಸೆಲ್ ಬೆಲೆ 98.07 ರೂಪಾಯಿ ದಾಖಲಾಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 115.15 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 106.23 ರೂಪಾಯಿ ನಿಗದಿಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 109.79 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 101.19 ರೂಪಾಯಿ ನಿಗದಿಯಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 106.04 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 101.19 ರೂಪಾಯಿ ನಿಗದಿಯಾಗಿದೆ.