ಡಿಜಿಟಲ್ ಡೆಸ್ಕ್ : 27 ವರ್ಷದ ಮಹಿಳೆ ಒಂದೇ ಬಾರಿಗೆ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ವಿಸ್ಮಯಕಾರಿ ಘಟನೆಯು ಹೈದರಾಬಾದ್ನಲ್ಲಿ ನಡೆದಿದೆ.
ಹೈದರಾಬಾದ್ನ ಹಫೀಜ್ಬಾಬಾ ನಗರದ ನಿವಾಸಿಯಾದ ಮಹಿಳೆಯು ಒಂದೇ ಬಾರಿಗೆ ಒಂದು ಗಂಡು ಮಗು ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಈ ರೀತಿ ಒಂದೇ ಬಾರಿಗೆ ನಾಲ್ವರು ಮಕ್ಕಳಿಗೆ 5 ಕೋಟಿ ಮಹಿಳೆಯರಲ್ಲಿ ಒಬ್ಬರು ಜನ್ಮ ನೀಡುತ್ತಾರೆ. ಆದರೆ ಇಂತಹ ಪರಿಸ್ಥಿತಿಗಳಲ್ಲಿ ಹೆರಿಗೆ ಸಾಮಾನ್ಯವಾಗಿ ಅತ್ಯಂತ ಕಠಿಣದಾಯಕವಾಗಿ ಇರುತ್ತದೆ.
ಮೀನಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ಸ್ತ್ರೀರೋಗ ತಜ್ಞೆ ಡಾ. ಶೋಯೆಬಾ ಶುಕೂರ್, ಗರ್ಭಿಣಿ ಮೊದಲೇ ರಕ್ತದೊತ್ತಡ ಸಮಸ್ಯೆ ಹೊಂದಿದ್ದಳು. ಆಪರೇಷನ್ ವೇಳೆಯಂತೂ ಆಕೆಯ ರಕ್ತದೊತ್ತಡ 170/110 ತಲುಪಿತ್ತು ಎಂದು ಹೇಳಿದ್ದಾರೆ.
ಸಿ ಸೆಕ್ಷನ್ ಮೂಲಕ ಮಗುವನ್ನು ಹೊರತೆಗೆಯಲಾಯ್ತು. ಹೆರಿಗೆ ನಡೆಯುತ್ತಿರುವಾಗಲೇ ಆಕೆಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು. ಮಕ್ಕಳು ಕೂಡ ಮಲ ವಿಸರ್ಜನೆ ಮಾಡಿದ್ದವು. ಗರ್ಭದಲ್ಲಿಯೇ ಮಕ್ಕಳು ಮಲ ವಿಸರ್ಜನೆ ಮಾಡುವುದು ಅಪಾಯದ ಮುನ್ಸೂಚನೆಯಾಗಿದೆ. ಈ ಸಂದರ್ಭದಲ್ಲಿ ಮಕ್ಕಳು ಸಾವನ್ನಪ್ಪುವ ಅಪಾಯ ಹೆಚ್ಚಿರುತ್ತದೆ. ಇದೊಂದು ಅತ್ಯಂತ ಕಠಿಣ ಹೆರಿಗೆಯಾಗಿತ್ತು. ಬರೋಬ್ಬರಿ 3 ಗಂಟೆಗಳ ಅವಧಿ ಬಳಿಕ ನಾಲ್ಕು ಮಕ್ಕಳನ್ನು ಹೊರತೆಗೆಯಲಾಯ್ತು ಎಂದು ಹೇಳಿದ್ದಾರೆ.
ಇನ್ನು ನಾಲ್ವರು ಮಕ್ಕಳು ಹಾಗೂ ತಾಯಿ ಆರೋಗ್ಯ ಸ್ಥಿರವಾಗಿದೆ. ಇಬ್ಬರು ಮಕ್ಕಳಿಗೆ ಆಕ್ಸಿಜನ್ ಸಪೋರ್ಟ್ ನೀಡಲಾಗಿದೆ ಹಾಗೂ ಉಳಿದ ಇಬ್ಬರು ಮಕ್ಕಳು ಸಾಮಾನ್ಯವಾಗಿ ಉಸಿರಾಡುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.