ಬೆಂಗಳೂರು : ಕೊರೊನಾ ರೂಪಾಂತರದ ಎವೈ 4.2 ಬೆಂಗಳೂರಿನಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ. ಈ ಬೆನ್ನಲ್ಲೆ ಕರ್ನಾಟಕದ ಜನರು ಆತಂಕಗೊಂಡಿದ್ದಾರೆ. ಇದರ ಜೊತೆ ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿಯಾಗಲಿದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ ಸ್ಪಷ್ಟನೆ ನೀಡಿದೆ.
ಕಳೆದ ಬಾರಿ ರಾಜ್ಯದಲ್ಲಿ ಪ್ರತಿದಿನ ಸುಮಾರು 50,000 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗುತ್ತಿತ್ತು. ಆಗ ಲಾಕ್‌ಡೌನ್ ಶಿಫಾರಸು ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ಕೊರೊನಾ ಸಂಖ್ಯೆ 350 ಕ್ಕಿಂತ ಕಡಿಮೆಯಾಗಿದೆ ಎಂದು ಟಿಎಸಿ ಅಧ್ಯಕ್ಷ ಡಾ. ಎಂ.ಕೆ. ಸುದರ್ಶನ್ ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಜನರಲ್ಲಿ ಭಯ ಹುಟ್ಟಿಸುವ ಸುದ್ದಿ ಹರಡಲಾಗ್ತಿದೆ. ಆದ್ರೆ ಇದೆಲ್ಲವೂ ಆಧಾರ ರಹಿತವೆಂದು ಅವರು ಹೇಳಿದ್ದಾರೆ. ಕರ್ನಾಟಕದಲ್ಲಿ ಡೆಲ್ಟಾ ರೂಪಾಂತರದ ಎವೈ 4.2 ಎರಡು ಪ್ರಕರಣಗಳು ಬೆಂಗಳೂರಿನಲ್ಲಿವೆ.
ಭಾರತದಲ್ಲಿ 17 ಪ್ರಕರಣ ಪತ್ತೆಯಾಗಿದ್ದು, ಎರಡು ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಇದರಿಂದ ಬಳಲುತ್ತಿದ್ದವರು ಚೇತರಿಸಿಕೊಂಡಿದ್ದಾರೆ ಎಂದು ಟಿಎಸಿ ಅಧ್ಯಕ್ಷರು ಹೇಳಿದ್ದಾರೆ. ಬೆಂಗಳೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ. ಭಯಪಡುವ ಅಗತ್ಯವಿಲ್ಲ. ಪೋಷಕರು ಆಧಾರ ರಹಿತ ವಿಷ್ಯವನ್ನು ನಂಬಬೇಡಿ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಎಲ್ಲಾ ವಯೋಮಾನದವರಲ್ಲಿ ಸರಾಸರಿ ಪರೀಕ್ಷಾ ಧನಾತ್ಮಕತೆಯ ದರ ಪ್ರಸ್ತುತ ಶೇಕಡಾ 0.3 ರಷ್ಟಿದೆ. ವಿಶೇಷವಾಗಿ ಶಾಲಾ ಮಕ್ಕಳಿಗೆ ಇದು ಶೇಕಡಾ 0.13 ರಷ್ಟಿದೆ ಎಂದವರು ಹೇಳಿದ್ದಾರೆ. ಆರೋಗ್ಯ ಸಚಿವರೊಂದಿಗಿನ ಮುಂದಿನ ಸಭೆಯಲ್ಲಿ ರಾಜ್ಯದ ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ ಎಂದು ಡಾ. ಸುದರ್ಶನ್ ಹೇಳಿದ್ದಾರೆ.