ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ಕರ್ನಾಟಕ ಲೋಕಾಯುಕ್ತ ದೂರು ದಾಖಲಿಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಮಂಗಳೂರು ನಗರದ ಕೈಗಾರಿಕಾ ಸಂಸ್ಥೆ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್)ನಿಂದ ಸ್ಥಳೀಯ ತೋಡು ಮತ್ತು ಫಲ್ಗುಣಿ ನದಿಗೆ ಅಪಾಯಕಾರಿ ರಾಸಾಯನಿಕ ತ್ಯಾಜ್ಯ ಹರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಲೋಕಾಯುಕ್ತ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ವರದಿ ನೀಡುವಂತೆ ಆಗ್ರಹಿಸಿ ನೋಟಿಸ್ ಜಾರಿ ಮಾಡಿದೆ.
ತ್ಯಾಜ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಲೋಕಾಯುಕ್ತ, ದ.ಕ. ಜಿಲ್ಲಾಧಿಕಾರಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಈ ಬಗ್ಗೆ ನ.2 ರೊಳಗೆ ಸೂಕ್ತ ಹೇಳಿಕೆ, ವಸ್ತುಸ್ಥಿತಿಯ ಬಗ್ಗೆ ವರದಿ ಹಾಗೂ ಜಲಮೂಲ ಕಲುಷಿತವಾಗುವುದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ, ಮಂಗಳೂರು ಮನಪಾ ಆಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ, ಮಂಗಳೂರು ತಹಶೀಲ್ದಾರ್, ಕೆಎಸ್‌ಪಿಸಿಬಿಯ ಹಿರಿಯ ಪರಿಸರ ಅಧಿಕಾರಿ, ಎಂಆರ್‌ಪಿಎಲ್ ಎಂಡಿಗೆ ನೋಟಿಸ್ ಜಾರಿಗೊಳಿಸಿದೆ.
ಎಂಆರ್‌ಪಿಎಲ್‌ನಿಂದ ಅಪಾಯಕಾರಿ ರಾಸಾಯನಿಕ ತ್ಯಾಜ್ಯವನ್ನು ಅಕ್ರಮವಾಗಿ ನದಿಗೆ ಹರಿಬಿಟ್ಟು ಸ್ಥಳೀಯ ಜಲಮೂಲಗಳನ್ನು ನಾಶಪಡಿಸುತ್ತಿರುವ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ
ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿಯವರು 23 ಪುಟಗಳ ಸುದೀರ್ಘ ನೋಟಿಸ್‌ನಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಂವಿಧಾನದ ಆರ್ಟಿಕಲ್ 21ರ ಪ್ರಕಾರ ಆರೋಗ್ಯಯುತ ಪರಿಸರ ಹಾಗೂ ಮಾಲಿನ್ಯ ಮುಕ್ತ ನೀರು ಎಲ್ಲಾ ನಾಗರಿಕರ ಹಕ್ಕು. ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ರಾಜ್ಯ ಹಾಗೂ ಅಧಿಕಾರಿಗಳ ಕರ್ತವ್ಯ ಎಂದು ಪರಿಸರ ಮಾಲಿನ್ಯದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಪರಿಸರ ರಕ್ಷಣಾ ಕಾಯ್ದೆ 1986ರ ಪ್ರಕಾರ, ಪರಿಸರಕ್ಕೆ ಮಾಲಿನ್ಯಕಾರಕ ತ್ಯಾಜ್ಯ ಹರಿಸುವುದನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ 5 ವರ್ಷ ಜೈಲು ಶಿಕ್ಷೆ ಹಾಗೂ 1ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಆದ್ದರಿಂದ ಲೋಕಾಯುಕ್ತ, ಸುಮೊಟೊ ಪ್ರಕರಣ ದಾಖಲಿಸಿದೆ ಎಂದು 23 ಪುಟಗಳ ಸುದೀರ್ಘ ನೋಟಿಸ್‌ನಲ್ಲಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.