ಮಂಗಳೂರು: ತುಳುನಾಡಿನ ಸಾಂಪ್ರದಾಯಿಕ ಹೆಮ್ಮೆಯ ಕ್ರೀಡೆ ಕಂಬಳ ನಡೆಸಲು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸಿದ್ಧತೆ ನಡೆದಿದ್ದು, ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನ ಕಂಬಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ನ.27ರಿಂದ ಮಾರ್ಚ್ 26ರ ವರೆಗೆ ಒಟ್ಟು 17 ಕಂಬಳ ಕೂಟಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ವೇಳಾಪಟ್ಟಿ ಪ್ರಕಟಗೊಂಡಿದ್ದರೂ, ಕೆಲವು ಕಂಬಳಗಳ ದಿನಾಂಕಗಳು ಬದಲಾಗುವ ಸಾಧ್ಯತೆಗಳಿವೆ ಎಂದು ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ತಿಳಿಸಿದ್ದಾರೆ.
ಕಂಬಳ ವೇಳಾಪಟ್ಟಿ:
ನ.27 ಮೂಡುಬಿದಿರೆ, ಡಿ.11 ಹೊಕ್ಕಾಡಿ, ಡಿ.18 ಮಂಗಳೂರು, ಡಿ.26 ಮೂಲ್ಕಿ, ಜ.1 ಕಕ್ಕೆಪದವು, ಜ.8 ಅಡ್ವೆ ನಂದಿಕೂರು, ಜ.16 ಮಿಯ್ಯಾರು, ಜ.22 ಪುತ್ತೂರು, ಜ.29 ಐಕಳ, ಫೆ.5 ಬಾರಾಡಿ, ಫೆ.12 ಜೆಪ್ಪು, ಫೆ.19 ವಾಮಂಜೂರು, ಫೆ.26 ಪೈವಳಿಕೆ, ಮಾ.5 ಕಟಪಾಡಿ, ಮಾ.12 ಉಪ್ಪಿನಂಗಡಿ, ಮಾ.19 ಬಂಗಾಡಿ, ಮಾ.26 ವೇಣೂರಿನಲ್ಲಿ ನಡೆಯಲಿದೆ.
ಪಿಲಿಕುಳ ಕಂಬಳ ಇನ್ನೂ ನಿಗದಿಗೊಂಡಿಲ್ಲ. ಡಿಸೆಂಬರ್‌ನಲ್ಲಿ ಆಯೋಜನೆಗೊಳ್ಳಬಹುದು ಎಂಬ ನಿರೀಕ್ಷೆಗಳಿವೆ. ತಲಪಾಡಿ ಸೂರ್ಯಚಂದ್ರ ಜೋಡುಕರೆ ಕಂಬಳ ಜಮೀನು ತಕರಾರಿನಿಂದಾಗಿ ಇಲ್ಲಿ ಈ ವರ್ಷವೂ ಕಂಬಳ ನಡೆಯುತ್ತಿಲ್ಲ. ಕಾಸರಗೋಡಿನ ಪೈವಳಿಕೆ ಕಂಬಳಕ್ಕೆ ದಿನಾಂಕ ನಿಗದಿಯಾಗಿದ್ದರೂ, ಕೇರಳದ ಕೋವಿಡ್-19 ಸ್ಥಿತಿಗತಿಯನ್ನು ಅವಲಂಬಿಸಿದೆ.
ಈ ಹಿಂದೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಸುನೀಲ್ ಕುಮಾರ್ ಅವರು ಮಿಯ್ಯಾರು ಕಂಬಳಕ್ಕೆ ಸಿಎಂರನ್ನು ಆಹ್ವಾನಿಸಲು ಉತ್ಸುಕರಾಗಿದ್ದಾರೆ. ಮಂಗಳೂರು ತಾಲೂಕಿನ ಬೋಳಿಯಾರು ಮತ್ತು ಮೂಡುಬಿದಿರೆ ತಾಲೂಕಿನ ಪಣಪಿಲ ಎಂಬಲ್ಲಿ ಮುಂದಿನ ವರ್ಷ (2022-23) ಅಧಿಕೃತವಾಗಿ ಜೋಡುಕರೆ ಕಂಬಳಗಳು ನಡೆಯುವ ಸಾಧ್ಯತೆ ಇದೆ.