ನವದೆಹಲಿ : ಕೋವಿಡ್ ಲಸಿಕೆ ಅಭಿಯಾನದಲ್ಲಿ ಇಂದು ಭಾರತ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ದೇಶದಲ್ಲಿ 100 ಕೋಟಿ ಡೋಸ್ ಪೂರ್ಣಗೊಂಡಿದೆ.
ಭಾರತದಲ್ಲಿ 9 ತಿಂಗಳಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಲಸಿಕೆ ನೀಡಿದ ದೇಶ ಭಾರತವಾಗಿದೆ.ಭಾರತದಲ್ಲಿ ನೀಡಲಾದ ಕೋವಿಡ್-19 ಲಸಿಕೆ ಡೋಸ್ ಗಳ ಸಂಖ್ಯೆ 100 ಕೋಟಿ ಗಡಿ ದಾಟುತ್ತಿದ್ದಂತೆ ಪ್ರಧಾನಿ ಮೋದಿ ಅವರು ಆರ್ ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿದರು.
ಆರೋಗ್ಯ ಕಾರ್ಯಕರ್ತರೊಂದಿಗೆ ಮಾತನಾಡಲಿದ್ದಾರೆ. ಜೊತೆಗೆ 100 ಕೋಟಿ ಡೋಸ್ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆಂಪು ಕೋಟೆಯ ಮೇಲೆ ಅತಿ ದೊಡ್ಡ ತ್ರಿವರ್ಣ ಧ್ವಜ ಪ್ರದರ್ಶನ ಮಾಡಲಾಗುವುದು.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಬುಧವಾರ ತಡರಾತ್ರಿವರೆಗೆ ಒಟ್ಟಾರೆ 99.70 ಕೋಟಿ ಜನರು ಲಸಿಕೆಯ ಡೋಸ್ ಪಡೆದಿದ್ದಾರೆ. ದೇಶಾದ್ಯಂತ ಇದುವರೆಗೆ 71 ಕೋಟಿ ಜನರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಈ ಪೈಕಿ ಕೊರೊನಾ ವಾರಿಯರ್ಸ್, ಹಿರಿಯ ನಾಗರಿಕರು ಕೂಡ ಸೇರಿದ್ದಾರೆ. ವರ್ಷಾಂತ್ಯದ ವೇಳೆಗೆ 80 ಕೋಟಿ ಜನರು ಮೊದಲ ಡೋಸ್ ಪಡೆದಿರುತ್ತಾರೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.