ಮಂಗಳೂರು: ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹಸುಗೂಸನ್ನು ಅದಲು ಬದಲಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ನ್ಯಾಯಾಲಯ ಮಗು, ತಂದೆ ಹಾಗೂ ತಾಯಿಯ ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡಿದೆ.
ತಮ್ಮ ಮಗು ಲೇಡಿಗೋಷನ್ ಆಸ್ಪತ್ರೆಯಲ್ಲಿ ಅದಲು ಬದಲಾಗಿದೆ ಎಂದು ಆರೋಪಿಸಿ ಕುಂದಾಪುರ ನಿವಾಸಿ ಮುಸ್ತಫಾ ಎಂಬುವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ನ್ಯಾಯಾಲಯ ನೀಡಿರುವ ಆದೇಶದನ್ವಯ ಅ.19ರಂದು ಮಗು ಹಾಗೂ ಪೋಷಕರ ಡಿಎಎನ್ ಪರೀಕ್ಷೆ ನಡೆಯಲಿದೆ.
ಬಳಿಕ ಇದರ ಸ್ಯಾಂಪಲ್ ಅನ್ನು ಹೈದರಾಬಾದ್ ಅಥವಾ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುವುದು. ಮೂರು ತಿಂಗಳ ಒಳಗೆ ಇದರ ವರದಿ ಬರಲಿದೆ. ಈ ವರದಿಯ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ಬಂದರು ಪೊಲೀಸರು ತಿಳಿಸಿದ್ದಾರೆ.
ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆಯ ವೇಳೆ ತಮಗೆ ಹುಟ್ಟಿರುವುದು ಹೆಣ್ಣು ಮಗು ಎಂದಿದ್ದರು. ಅಲ್ಲದೆ ದಾಖಲೆಯಲ್ಲಿ ಹೆಣ್ಣು ಮಗುವೆಂದೇ ನಮೂದಿಸಿ ಬಳಿಕ ಗಂಡು ಮಗುವನ್ನು ನೀಡಲಾಗಿದೆ ಎಂದು ಪೋಷಕರು ದೂರಿದ್ದಾರೆ. ಮಗು ಅದಲು ಬದಲಾಗಿರುವ ಬಗ್ಗೆ ಅನುಮಾನಗೊಂಡ ಪೋಷಕರು, ನಗರದ ಬಂದರು ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ತನಿಖೆ ಮುಂದುವರಿದಿದೆ. ಸದ್ಯ ಮಗು ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.