ಮಂಗಳೂರು: ಆಯುಧ ಪೂಜೆ ದಿನವಾದ ನಿನ್ನೆ ತ್ರಿಶೂಲ ದೀಕ್ಷೆ ಹೆಸರಲ್ಲಿ ಹಿಂದೂ ಕಾರ್ಯಕರ್ತರಿಗೆ ಬಜರಂಗದಳದವರು ಶಸ್ತ್ರ ಹಂಚಿದ ಘಟನೆ ನಡೆದಿದ್ದು, ಕಾರ್ಯಕ್ರಮದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದಿದೆ.
ಮಂಗಳೂರು ನಗರದ ಕದ್ರಿ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ನಡೆದ ತ್ರಿಶೂಲ ದೀಕ್ಷೆ ಕಾರ್ಯಕ್ರಮದಲ್ಲಿ ಹಿಂದೂ ಕಾರ್ಯಕರ್ತರಿಗೆ ಚೂರಿ ಮಾದರಿಯ ತ್ರಿಶೂಲದಂಥ ಶಸ್ತ್ರವನ್ನು ಹಂಚಿಕೆ ಮಾಡಲಾಗಿದೆ.
ಮಂಗಳೂರಿನ ಕದ್ರಿಯ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ವಿಎಚ್‌ಪಿ ವಿಭಾಗದ ಕಾರ್ಯದರ್ಶಿ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ನಡೆದ ತ್ರಿಶೂಲ ದೀಕ್ಷೆ ಕಾರ್ಯಕ್ರಮ, ಸದ್ಯ ತ್ರಿಶೂಲ ದೀಕ್ಷೆ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಕಾರ್ಯಕರ್ತರ ಕೈಗೆ ಬಹಿರಂಗವಾಗಿಯೇ ಶಸ್ತ್ರ ಕೊಡುವ ಮೂಲಕ ಬಜರಂಗದಳ ವಿವಾದಾತ್ಮಕ ಹೆಜ್ಜೆಯನ್ನ ಇಟ್ಟಿದೆ. ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ ಮಿತಿಮೀರಿದ ಬೆನ್ನಲ್ಲೇ ಬಜರಂಗದಳದ ಈ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
‘5 ಇಂಚಿನ ತ್ರಿಶೂಲದಿಂದ ಏನುಮಾಡಲು ಸಾಧ್ಯ?’- ಸ್ಪಷ್ಟನೆ ನೀಡಿದ ಶರಣ್ ಪಂಪ್ವೆಲ್
ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಈ ಕಾರ್ಯಕ್ರಮದಲ್ಲಿ ಯಾವುದೇ ವಿವಾದ ಇಲ್ಲ. ಪ್ರತಿ ವರ್ಷ ಆಯುಧ ಪೂಜೆಯ ದಿನ ಇಡೀ ರಾಷ್ಟ್ರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ತನ್ನ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆಯನ್ನು ನೀಡುತ್ತದೆ. ಈ ಬಾರಿಯೂ ನೀಡಿದ್ದೇವೆ.
ತ್ರಿಶೂಲ ದೀಕ್ಷೆ ಅನ್ನುವುದು ಯಾವುದೇ ಹೊಡೆದಾಟಕ್ಕೆ ನೀಡುವುದಿಲ್ಲ ಅಥವಾ ಹಿಂಸೆಗೆ ಪ್ರಚೋದನೆ ನೀಡುವುದಿಲ್ಲ. ತಮ್ಮ ಆತ್ಮರಕ್ಷಣೆಗೆ ಮತ್ತು ಧರ್ಮ ಜಾಗೃತಿಗಾಗಿ ದೀಕ್ಷೆ ಬೋಧನೆ ಮಾಡಲಾಗುತ್ತದೆ. ಮತ್ತು ಆ ತ್ರಿಶೂಲದಿಂದ ಏನೂ ಮಾಡಲು ಸಾಧ್ಯವಿಲ್ಲ. ಅದು ಐದೂಕಾಲು ಇಂಚಿನ ಸ್ಟೀಲ್‌ನಿಂದ ಮಾಡಿದ ತ್ರಿಶೂಲದ ಆಕೃತಿ ಎಂದು ಶರಣ್ ಪಂಪ್ವೆಲ್ ಸ್ಪಷ್ಟನೆ ನೀಡಿದ್ದಾರೆ.