ಸಮಗ್ರ ನ್ಯೂಸ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಮಾದಕ ವ್ಯಸನಿಗಳ ಚಿಕಿತ್ಸಾ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಸರ್ಕಾರ ಗಂಭೀರ ಆರೋಪ ಮಾಡಿದೆ.
ಕಳೆದ ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಕಾಬೂಲ್ನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ನಗರದ ಶಹರ್-ಎ-ನಾವ್ ಮತ್ತು ವಜೀರ್ ಅಕ್ಬರ್ ಖಾನ್ ಪ್ರದೇಶಗಳಲ್ಲಿ ಹೊಗೆಯ ಮೋಡಗಳು ಕಂಡುಬಂದಿವೆ. ಪಾಕಿಸ್ತಾನದ ಯುದ್ಧ ವಿಮಾನಗಳು ನಡೆಸಿದ ಈ ದಾಳಿಯಲ್ಲಿ ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆ ಸಂಪೂರ್ಣವಾಗಿ ಧ್ವಂಸಗೊಂಡಿದೆ ಎಂದು ವರದಿಯಾಗಿದೆ.
ಮೃತರ ಸಂಖ್ಯೆ: ತಾಲಿಬಾನ್ ಸರ್ಕಾರದ ಉಪ ವಕ್ತಾರ ಹಮ್ದುಲ್ಲಾ ಫಿತ್ರತ್ ಅವರ ಪ್ರಕಾರ, ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 400ಕ್ಕೆ ಏರಿಕೆಯಾಗಿದ್ದು, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಆಸ್ಪತ್ರೆ ನಾಶ: ಆರೋಗ್ಯ ಸಚಿವಾಲಯದ ವಕ್ತಾರ ಶರಾಫತ್ ಜಮಾನ್ ಮಾತನಾಡಿ, ಆಸ್ಪತ್ರೆಯ ಎಲ್ಲಾ ವಿಭಾಗಗಳು ನಾಶವಾಗಿವೆ. ಮೃತಪಟ್ಟವರಲ್ಲಿ ಹೆಚ್ಚಿನವರು ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಸ್ಪಷ್ಟನೆ:
ಈ ಆರೋಪವನ್ನು ಪಾಕಿಸ್ತಾನ ತಳ್ಳಿಹಾಕಿದೆ. ಕಾಬೂಲ್ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿ ತಾವು ಕೇವಲ ಮಿಲಿಟರಿ ನೆಲೆಗಳು ಮತ್ತು ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಪಾಕಿಸ್ತಾನದ ಮಾಹಿತಿ ಸಚಿವಾಲಯ ತಿಳಿಸಿದೆ. ಪಾಕಿಸ್ತಾನದ ನಾಗರಿಕರ ಮೇಲೆ ದಾಳಿ ನಡೆಸಲು ಈ ಸ್ಥಳಗಳನ್ನು ಬಳಸಲಾಗುತ್ತಿತ್ತು ಎಂಬುದು ಪಾಕ್ ವಾದ.
ತಾಲಿಬಾನ್ ಆಕ್ರೋಶ:
ತಾಲಿಬಾನ್ ಸರ್ಕಾರದ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಈ ದಾಳಿಯನ್ನು ಕಟುವಾಗಿ ಖಂಡಿಸಿದ್ದಾರೆ. “ಪಾಕಿಸ್ತಾನವು ಅಫ್ಘಾನಿಸ್ತಾನದ ಭೂಪ್ರದೇಶವನ್ನು ಅತಿಕ್ರಮಿಸುವ ಮೂಲಕ ಅಮಾನವೀಯ ಕೃತ್ಯ ಎಸಗಿದೆ” ಎಂದು ಅವರು ಕಿಡಿಕಾರಿದ್ದಾರೆ.







