‘ನನ್ನ ಜೊತೆ ಮಲಗಿದರಷ್ಟೇ ಗಂಡ ರಿಲೀಸ್ ‘| ಮೂಡಬಿದಿರೆ ಪಿಎಸ್ಐ ವಿರುದ್ಧ ಗಂಭೀರ ಆರೋಪ ಮಾಡಿದ ಮಹಿಳೆ

ಸಮಗ್ರ ನ್ಯೂಸ್: ಮೂಡುಬಿದಿರೆ ಠಾಣೆಯಲ್ಲಿ ದಾಖಲಾದ ಮೊಕದ್ದಮೆಯೊಂದರಲ್ಲಿ ವ್ಯಕ್ತಿಯೊಬ್ಬರು ಬಂಧನಕ್ಕೊಳಗಾಗಿದ್ದು, ಆತನ ಪತ್ನಿಯು ಠಾಣೆಯ ಇನ್‌ಸ್ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ನಗರ ಪೊಲೀಸ್‌ ಕಮಿಷನರ್‌ ಅವರು ಉತ್ತರ ಉಪವಿಭಾಗದ ಎಸಿಪಿಗೆ ನಿರ್ದೇಶನ ನೀಡಿದ್ದಾರೆ.

Ad Widget ... ..

‘ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ಪತಿಯನ್ನು ಬಿಡುಗಡೆಗೊಳಿಸುವುದಾಗಿ ಹಾಗೂ ₹ 25 ಲಕ್ಷ ನೀಡದಿದ್ದರೆ ನನ್ನ ಪತಿಯ ವಿರುದ್ಧ ರೌಡಿ ಶೀಟ್‌ ತೆರೆಯುವುದಾಗಿ ಮೂಡುಬಿದಿರೆ ಠಾಣೆಯ ಇನ್‌ಸ್ಪೆಕ್ಟರ್‌ ಸಂದೇಶ್‌ ಬಿ.ಜಿ. ಬೆದರಿಕೆ ಒಡ್ಡಿದ್ದಾರೆ. ಪೊಲೀಸ್ ಠಾಣೆಯ ವಾಹನ ನಿಲುಗಡೆ ಜಾಗದಲ್ಲೀ ಬೆದರಿಕೆ ಹಾಕಿದ್ದಾರೆ’ ಎಂದು ಮಹಿಳೆಯೊಬ್ಬರು ಆರೋಪಿಸಿದ್ದು, ಈ ಬಗ್ಗೆ ಕೆಲವು ಟಿ.ವಿ.ವಾಹಿನಿಗಳಲ್ಲಿ ಸೋಮವಾರ ಸುದ್ದಿ ಪ್ರಸಾರವಾಗಿತ್ತು. ಇದನ್ನು ಗಮನಿಸಿದ ರಾಜ್ಯ ಮಹಿಳಾ ಆಯೋಗವು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್‌ ಕಮಿಷನರ್‌ಗೆ ಸೂಚಿಸಿತ್ತು.

Ad Widget

ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಕಮಿಷನರ್‌ ಸುಧೀರ್‌ ಕುಮಾರ್ ರೆಡ್ಡಿ, ‘ಲೈಂಗಿಕ ಕಿರುಕುಳದ ಆರೋಪದ ಮೇಲೆ ಮೂಡುಬಿದಿರೆ ಠಾಣೆಯ ಇನ್‌ಸ್ಟಕ್ಟರ್‌ ವಿರುದ್ಧ ಯಾವುದೇ ಮಹಿಳೆ ನನಗೆ ದೂರು ನೀಡಿಲ್ಲ. ಯಾವುದೇ ಸಂತ್ರಸ್ತ ವ್ಯಕ್ತಿ ದೂರು ನೀಡಿದರೂ ಆ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಇನ್‌ಸ್ಪೆಕ್ಟರ್‌ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ನಗರ ಉತ್ತರ ಉಪವಿಭಾಗದ ಎಸಿಪಿಯವರಿಗೆ ಸೂಚಿಸಿದ್ದೇನೆ. ಎಸಿಪಿ ಅವರ ವರದಿ ಕೈಸೇರಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಇನ್‌ಸ್ಪೆಕ್ಟರ್‌ ವಿರುದ್ಧ ಆರೋಪ ಮಾಡಿರುವ ಮಹಿಳೆ ಹಾಗೂ ಆಕೆಯ ಸಹೋದರಿ ನಡುವೆ ವಿವಾದವಿದೆ. ಆ ಮಹಿಳೆ ನನ್ನನ್ನು ಭೇಟಿಯಾಗಿ, ಈ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ ಪಕ್ಷಪಾತ ವೆಸಗಿದ್ದಾರೆ ಎಂದು ಆರೋಪಿಸಿದ್ದರು. ಆ ಪ್ರಕರಣವು ನ್ಯಾಯಾಲಯದಲ್ಲಿದ್ದು, ಅದರಲ್ಲಿ ಇನ್‌ಸ್ಪಕ್ಟರ್‌ ಕಾನೂನುಬದ್ಧವಾಗಿ ನಡೆದುಕೊಂಡಿದ್ದರು. ಹಾಗಾಗಿ ಇನ್‌ಸ್ಪೆಕ್ಟರ್‌ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ’ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.

‘ನನ್ನನ್ನು ಭೇಟಿಯಾದ ಮಹಿಳೆಯು ಇನ್‌ಸ್ಪೆಕ್ಟರ್ ತಡೆಗೋಡೆ ಹಾರುವ ವಿಡಿಯೊ ಒಂದನ್ನು ತೋರಿಸಿದ್ದರು. ಆ ಸ್ವತ್ತಿನ ಮಾಲೀಕರು ದೂರು ನೀಡದ ಹೊರತು ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಯಾವುದೇ ಧ್ವನಿಮುದ್ರಿತ ದಾಖಲೆಗಳನ್ನು ಆ ಮಹಿಳೆ ಒದಗಿಸಿಲ್ಲ’ ಎಂದರು.

Leave a Comment

Your email address will not be published. Required fields are marked *