ಸಮಗ್ರ ನ್ಯೂಸ್: ಪ್ರಯಾಗ್ರಾಜ್ನಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ವೈರಲ್ ಆಗಿದ್ದ ವಿಡಿಯೋ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದ ಯುವತಿ ಮೊನಾಲಿಸಾ ಭೋಂಸ್ಲೆ ಕೇರಳದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಮ್ಮ ಪ್ರಿಯತಮನೊಂದಿಗೆ ವಾಸಿಸಲು ಮತ್ತು ಆತನನ್ನು ವಿವಾಹವಾಗಲು ತಮಗೆ ರಕ್ಷಣೆ ನೀಡಬೇಕೆಂದು ಬೆಕ್ಕಿನ ಕಣ್ಣಿನ ಬೆಡಗಿ ತಿರುವನಂತಪುರಂ ಪೊಲೀಸರಲ್ಲಿ ಕೋರಿದ್ದಾರೆ.
ಪೊಲೀಸರ ಪ್ರಕಾರ, ಭೋಂಸ್ಲೆ ಮತ್ತು ಆಕೆಯ ಉತ್ತರ ಪ್ರದೇಶ ಮೂಲದ ಪ್ರಿಯತಮ ಚಿತ್ರತಂಡದ ಸದಸ್ಯರೊಂದಿಗೆ ಠಾಣೆಗೆ ಆಗಮಿಸಿದ್ದರು. ತನ್ನ ಇಚ್ಛೆಗೆ ವಿರುದ್ಧವಾಗಿ ತಂದೆ ತನ್ನನ್ನು ಮರಳಿ ಹುಟ್ಟೂರಿಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಆಕೆ ಆರೋಪಿಸಿದ್ದಾರೆ. ಈ ಜೋಡಿ ಇತ್ತೀಚೆಗೆ ಚಲನಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಹತ್ತಿರದ ಪೂವರ್ಗೆ ಆಗಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭವಾದ ಅವರ ಪ್ರೇಮ ಸಂಬಂಧವನ್ನು ಅವರ ಕುಟುಂಬಗಳು ವಿರೋಧಿಸಿದ ನಂತರ ಇಬ್ಬರೂ ಪೊಲೀಸ್ ಠಾಣೆಗೆ ಬಂದರು. ಮೊನಾಲಿಸಾ ಮಧ್ಯಪ್ರದೇಶದ ಇಂದೋರ್ ಮೂಲದವರಾದರೆ, ಫರ್ಮಾನ್ ಖಾನ್ ಮಹಾರಾಷ್ಟ್ರದವರು. ಮೊನಾಲಿಸಾ ಅವರ ಕುಟುಂಬವು ಇಬ್ಬರ ನಡುವಿನ ಸಂಬಂಧವನ್ನು ತೀವ್ರವಾಗಿ ವಿರೋಧಿಸಿತು. ತನ್ನ ತಂದೆ ಬೇರೆ ವ್ಯಕ್ತಿಯನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮೊನಾಲಿಸಾ ಪೊಲೀಸರಿಗೆ ತಿಳಿಸಿದ್ದಾರೆ. ಅದಕ್ಕಾಗಿಯೇ ಅವರು ಸಹಾಯ ಪಡೆಯಲು ಪೊಲೀಸ್ ಠಾಣೆಗೆ ಹೋಗಿದ್ದರು.
ಇನ್ನು ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸುತ್ತಾ, ತಾನು ತಂದೆಯ ಜೊತೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿರುವ ಮೊನಾಲಿಸಾ, ತನ್ನ ಪ್ರಿಯತಮನನ್ನೇ ಮದುವೆಯಾಗುವುದಾಗಿ ಸ್ಪಷ್ಟಪಡಿಸಿದರು. ಇಬ್ಬರೂ ವಯಸ್ಕರಾಗಿರುವುದರಿಂದ ತಮ್ಮ ಇಚ್ಛೆಯಂತೆ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ ಎಂದು ತಿಳಿಸಿದ್ದಾರೆ.
ಸದ್ಯ ಮೊನಾಲಿಸಾ ಭೋಂಸ್ಲೆ ಮತ್ತು ಗೆಳೆಯ ಫರ್ಮಾನ್ ಖಾನ್ ಅವರ ವಿವಾಹವು ಪೂವಾರ್ ಅರುಮನೂರ್ ನೈನಾರ್ ದೇವಸ್ಥಾನದಲ್ಲಿ ನಡೆಯಿತು. ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಚಿವ ವಿ. ಶಿವನ್ಕುಟ್ಟಿ ಮತ್ತು ಜಿಲ್ಲಾ ಕಾರ್ಯದರ್ಶಿ ಎ.ಎ. ರಹೀಮ್ ಸೇರಿದಂತೆ ನೂರಾರು ಮಂದಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ದೇವಾಲಯದ ಹೊರಗಿನ ಗುರು ಮಂದಿರದಲ್ಲಿ ವಿವಾಹ ನಡೆಯಿತು.







