ಸಮಗ್ರ ನ್ಯೂಸ್: ಅಮೆರಿಕದ ಮಿತ್ರತ್ವ ಹಾಗೂ ಸೇನಾ ನೆಲೆ ಹೊಂದಿರುವ ಕಾರಣಕ್ಕೆ ಇರಾನ್‌ನಿಂದ ಯುಎಇ ಭೀಕರ ಕ್ಷಿಪಣಿದಾಳಿ ಎದುರಿಸುತ್ತಿದೆ. ಹೀಗಾಗಿ ಇಲ್ಲಿನ ವಲಸಿಗರು ಜೀವ ಉಳಿಸಿಕೊಳ್ಳಲು ಸ್ವದೇಶಕ್ಕೆ ಪಲಾಯನಗೈಯ್ಯುತ್ತಿದ್ದಾರೆ. ಆದರೆ ತಾವು ಸಾಕಿದ ಪ್ರಾಣಿಗಳನ್ನು ಅನಿವಾರ್ಯವಾಗಿ ಬೀದಿಪಾಲು ಮಾಡಿ ಓಡಿ ಹೋಗುತ್ತಿದ್ದಾರೆ.
ಮಿಸೈಲ್‌ಗಳ ಮಳೆಯಿಂದ ಪಾರಾಗಲು ನಗರ ಅಥವಾ ದೇಶವನ್ನೇ ತೊರೆಯಲು ಮುಂದಾಗಿರುವ ಜನ, ಪ್ರಾಣಿದಯಾ ಸಂಘಗಳು ಮತ್ತು ಅವುಗಳಿಗೆ ಆಶ್ರಯ ಒದಗಿಸುವ ಸಂಸ್ಥೆಗಳಿಗೆ ಕರೆ ಮಾಡಿ, ತಾವು ಸಾಕಿದ್ದ ಅಥವಾ ದತ್ತು ಪಡೆದಿದ್ದ ಬೆಕ್ಕು, ನಾಯಿಯಂತಹ ಪ್ರಾಣಿಗಳನ್ನು ನೋಡಿಕೊಳ್ಳುವಂತೆ ಗೋಗರೆಯುತ್ತಿದ್ದಾರೆ. ಅದು ಸಾಧ್ಯವಾಗದಾಗ ಅವುಗಳನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದಾರೆ ಎನ್ನಲಾಗಿದೆ. ವಿಮಾನಗಳಲ್ಲಿ ಪ್ರಾಣಿಗಳನ್ನು ಕರೆದೊಯ್ಯಲು ಸದ್ಯ ಅನುಮತಿಯಿಲ್ಲದ ಕಾರಣ ಇದು ಅನಿವಾರ್ಯವಾಗಿದೆ.
ದಯನೀಯ ಸ್ಥಿತಿಯಲ್ಲಿರುವ ಪ್ರಾಣಿಗಳಿಗೆ ದಯಾಮರಣವನ್ನು ನೀಡುವ ಬಗ್ಗೆ ಪಶುವೈದ್ಯರು ಚಿಂತನೆ ನಡೆಸುತ್ತಿದ್ದು, ಈಗಾಗಲೆ ಕೆಲವು ನಾಯಿಗಳನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಕಾರಣ, ಆಶ್ರಯ ಕಳೆದುಕೊಂಡಿರುವ ಪ್ರಾಣಿಗಳು ಅಪಾರ ಸಂಖ್ಯೆಯಲ್ಲಿದ್ದು, ಅವೆಲ್ಲವನ್ನು ನೋಡಿಕೊಳ್ಳುವ ಸೌಲಭ್ಯ ಸಂಘಗಳ ಬಳಿ ಲಭ್ಯವಿಲ್ಲ. ಜತೆಗೆ ಅದಕ್ಕಾಗಿ ಆರ್ಥಿಕ ನೆರವೂ ಸಿಗುತ್ತಿಲ್ಲ.







