ಸುಬ್ರಹ್ಮಣ್ಯ: ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ಮಿತಿಮೀರಿದ್ದು, ಭಾನುವಾರ (ಮಾರ್ಚ್ 08) ಸಂಜೆ ರಥಬೀದಿಯಲ್ಲಿ ನಡೆದ ಹೋರಿಗಳ ಜಗಳದಿಂದಾಗಿ ಮಹಿಳೆ ಮತ್ತು ಮಗು ಗಾಯಗೊಂಡಿದ್ದಾರೆ. ರಥಬೀದಿಯಲ್ಲಿ ಎರಡು ಹೋರಿಗಳು ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾಗ, ಹತ್ತಿರದಲ್ಲೇ ಸಾಗುತ್ತಿದ್ದ ಭಕ್ತರು ಭಯಭೀತರಾಗಿ ಓಡಿದ್ದಾರೆ.
ಈ ಗೊಂದಲದ ನಡುವೆ ಮಹಿಳೆ ಹಾಗೂ ಮಗು ಎಡವಿ ಬಿದ್ದು ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಅವರನ್ನು ಉಪಚರಿಸಿದ್ದಾರೆ. ಈ ಆತಂಕಕಾರಿ ದೃಶ್ಯದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ರಥಬೀದಿಯಲ್ಲಿ ಬೀಡಾಡಿ ದನಗಳು ಹಾಗೂ ನಾಯಿಗಳ ಕಾಟದಿಂದಾಗಿ ಮುಕ್ತವಾಗಿ ಓಡಾಡುವುದು ಕಷ್ಟಕರವಾಗಿದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದರೂ, ಸಂಬಂಧಪಟ್ಟ ಆಡಳಿತ ಮಂಡಳಿ ಅಥವಾ ಸ್ಥಳೀಯ ಸಂಸ್ಥೆಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಈ ಬೀಡಾಡಿ ಜಾನುವಾರುಗಳನ್ನು ನಿಯಂತ್ರಿಸಲು ತಕ್ಷಣವೇ ಸೂಕ್ತ ವ್ಯವಸ್ಥೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.







