ಸಮಗ್ರ ನ್ಯೂಸ್: ‘ಅಣ್ವಸ್ತ್ರದ ಬಟನ್ ಯಾವಾಗಲೂ ನನ್ನ ಮೇಜಿನ ಮೇಲಿರುತ್ತದೆ. ಅಮೆರಿಕದ ಎಲ್ಲಾ ಪ್ರದೇಶಗಳು ನಮ್ಮ ಅಣ್ವಸ್ತ್ರ ವ್ಯಾಪ್ತಿಯಲ್ಲಿವೆ. ನಾವು ಯಾವುದೇ ಎಚ್ಚರಿಕೆ ಇಲ್ಲದೆ ಅಮೆರಿಕದ ಯಾವುದೇ ಸ್ಥಳವನ್ನು ಹೊಡೆಯಬಹುದು’ ಎಂದು ಕಿಮ್ ಜಾಂಗ್ ಉನ್ ಎಚ್ಚರಿಕೆ ನೀಡಿದ್ದಾರೆ.
‘ಶತ್ರುಗಳು ಎಂದೂ ನೋಡಿರದ ಭಯವನ್ನು ಅನುಭವಿಸುತ್ತಾರೆ. ಇದು ಬೆದರಿಕೆಯಲ್ಲ, ಆದರೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಅರ್ಥಮಾಡಿಕೊಳ್ಳಬೇಕಾದ ವಾಸ್ತವ’ ಎಂದು ಹೇಳಿದ್ದಾರೆ.
‘ಈ ಘರ್ಷಣೆ ಇನ್ನು ಮುಂದೆ ಕೊರಿಯನ್ ಪರ್ಯಾಯ ದ್ವೀಪಕ್ಕೆ ಮಾತ್ರ ಸೀಮಿತವಾಗಿಲ್ಲ. ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ಗಳು ನಮ್ಮ ಗುರಿಗಳು’ ಎಂಬರ್ಥದಲ್ಲಿ ಕಿಮ್ಮಣ್ಣ ವಾರ್ನಿಂಗ್ ಮಾಡಿದ್ದಾರೆ.
ಉತ್ತರ ಕೊರಿಯಾ ಮೇಲೆ ದಾಳಿಗೆ ಸಿದ್ಧತೆ?
ಮಧ್ಯಪ್ರಾಚ್ಯ ಅಕ್ಷರಶಃ ಧಗಧಗಿಸುತ್ತಿದೆ. ಇರಾನ್ ಜೊತೆಗಿನ ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕೆಂಬ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಸೇರಿ ತೆಗೆದುಕೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರ ಮಧ್ಯೆ, ಉತ್ತರ ಕೊರಿಯಾ ಮೇಲೆ ದಾಳಿಗೆ ಅಮೆರಿಕ ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿದೆ.
ಇರಾನ್ ಸಂಘರ್ಷದ ನಡುವೆಯೂ ಟ್ರಂಪ್ ಗಮನ ಏಷ್ಯಾ ಕಡೆಗೆ ಸರಿದಿದೆ. ಇದ್ದಕ್ಕಿದ್ದಂತೆ ದಕ್ಷಿಣ ಕೊರಿಯಾದಲ್ಲಿ ಅಮೆರಿಕದ ಸೈನ್ಯವನ್ನು ನಿಯೋಜಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮೇಲೆ ನೇರವಾಗಿ ಗುರಿಯಿಟ್ಟಿಲ್ಲವಾದರೂ, ಕಿಮ್ ಮೇಲೆ ಒತ್ತಡ ಹೇರುವ ತಂತ್ರವೆಂದು ನೋಡಲಾಗುತ್ತಿದೆ. ಉದ್ವಿಗ್ನತೆಯ ನಡುವೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಪ್ರಮುಖ ಮಿಲಿಟರಿ ವ್ಯಾಯಾಮವನ್ನು ಪ್ರಾರಂಭಿಸಿವೆ.
ಸಾವಿರಾರು ಸೈನಿಕರನ್ನು ಒಳಗೊಂಡ ಈ ವ್ಯಾಯಾಮವು ಮಧ್ಯಪ್ರಾಚ್ಯದ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿರುವ ಸಮಯದಲ್ಲಿ ನಡೆಯುತ್ತಿದೆ. “ಫ್ರೀಡಂ ಶೀಲ್ಡ್” ಎಂದು ಕರೆಯಲ್ಪಡುವ ಈ ಮಿಲಿಟರಿ ವ್ಯಾಯಾಮವು ಮತ್ತೊಮ್ಮೆ ಏಷ್ಯಾದಲ್ಲಿ ಕಾರ್ಯತಂತ್ರದ ಉದ್ವಿಗ್ನತೆಯನ್ನು ಹುಟ್ಟುಹಾಕಿದೆ.
ಅಮೆರಿಕದ ಮಿಲಿಟರಿ ಚಟುವಟಿಕೆಯಲ್ಲಿನ ಈ ಹಠಾತ್ ಏರಿಕೆ ಏಕೆ ಸಂಭವಿಸಿದೆ ಎಂಬ ಪ್ರಶ್ನೆಗಳು ಎದ್ದಿವೆ. ಇದು ಕೇವಲ ನಿಯಮಿತ ಮಿಲಿಟರಿ ವ್ಯಾಯಾಮವಾ ಅಥವಾ ಇದರ ಹಿಂದೆ ಆಳವಾದ ಸಂದೇಶವಿದ್ಯಾ? ಎಂಬ ಪ್ರಶ್ನೆ ಎದ್ದಿದೆ.
‘ಕಿಮ್ ಜಾಂಗ್ ಉನ್ ಈ ಹಿಂದೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡುವಿನ ಜಂಟಿ ಮಿಲಿಟರಿ ವ್ಯಾಯಾಮಗಳನ್ನು ಯುದ್ಧಕ್ಕೆ ಸಿದ್ಧತೆ’ ಎಂದು ಬಣ್ಣಿಸಿದ್ದಾರೆ. ಈ ವ್ಯಾಯಾಮಗಳು ಉತ್ತರ ಕೊರಿಯಾದ ಮೇಲೆ ಒತ್ತಡ ಹೇರುವ ತಂತ್ರವೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.







