ಭಾರತದೊಂದಿಗೆ ಸಮರಾಭ್ಯಾಸ ನಡೆಸಿ ತೆರಳುತ್ತಿದ್ದ ಇರಾನ್ ನ IRIS ಡೇನಾ ನೌಕೆಯನ್ನು ಹೊಡೆದುರುಳಿಸಿದ ಅಮೇರಿಕಾ| 87 ಮಂದಿ ಸಾವು, 32 ಮಂದಿ ರಕ್ಷಣೆ

ಸಮಗ್ರ ನ್ಯೂಸ್: ಕಳೆದ 5 ದಿನಗಳಿಂದ ಮಧ್ಯಪ್ರಾಚ್ಯ ಹೊತ್ತಿ ಉರಿಯುವಂತೆ ಮಾಡಿದ್ದ ಅಮೆರಿಕ-ಇಸ್ರೇಲ್‌ ಮತ್ತು ಇರಾನ್‌ ನಡುವಿನ ಕದನ ಇದೀಗ ನೇರವಾಗಿ ಭಾರತದ ಬುಡಕ್ಕೆ ಬಂದು ತಲುಪಿದೆ. ಇತ್ತೀಚೆಗಷ್ಟೇ ಭಾರತದ ನೌಕಾಪಡೆಗೆ ಜೊತೆ ಆಂಧ್ರದ ವಿಶಾಖಪಟ್ಟಣದಲ್ಲಿ ನೌಕಾ ಕವಾಯತು ನಡೆಸಿ ವಾಪಸ್‌ ತೆರಳುತ್ತಿದ್ದ ಇರಾನ್‌ನ ‘ಐಆರ್‌ಐಎಸ್‌ ಡೆನಾ’ ನೌಕೆಯನ್ನು ಅಮೆರಿಕ ತನ್ನ ಸಬ್‌ಮರೀನ್ ಬಳಸಿ ಹೊಡೆದುರುಳಿಸಿದ್ದು, ಆ ನೌಕೆಯಲ್ಲಿದ್ದ 87 ಮಂದಿ ಸಾವಿಗೀಡಾಗಿದ್ದಾರೆ.

Ad Widget ... ..

ದಾಳಿಯ ತೀವ್ರತೆಗೆ ನೌಕೆ ಜಲಸಮಾಧಿಯಾಗಿದ್ದು, ಅದರೊಳಗಿದ್ದ 32 ಜನರನ್ನು ರಕ್ಷಿಸಲಾಗಿದೆ. ಉಳಿದ 61 ಜನರು ನಾಪತ್ತೆಯಾಗಿದ್ದು, ಅವರೆಲ್ಲಾ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಮೆರಿಕ ತನ್ನ ಸಬ್‌ಮರೀನ್‌ನಿಂದ ಕ್ಷಿಪಣಿ ಹಾರಿಸಿ ಶತ್ರುದೇಶದ ನೌಕೆ ಹೊಡೆದುರುಳಿಸಿದ್ದು 2ನೇ ವಿಶ್ವ ಮಹಾಯುದ್ಧದ ಬಳಿಕ ಇದೇ ಮೊದಲು ಎಂದು ಆ ದೇಶ ಹೇಳಿದೆ. ಹೀಗಾಗಿ ಕಳೆದ 5 ದಿನಗಳಿಂದ ವಾಯುದಾಳಿಗೆ ಸೀಮಿತವಾಗಿದ್ದ ಯುದ್ಧಕ್ಕೆ ಇದೀಗ ನೌಕಾಪಡೆಯ ಪ್ರವೇಶ ಆದಂತಾಗಿದೆ.

Ad Widget

ಭಾರತಕ್ಕೆ ಆಗಮನ:
ಫೆ.18ರಿಂದ ಫೆ.25ರ ಅವಧಿಯಲ್ಲಿ ಭಾರತ- ಇರಾನ್‌, ಬಂಗಾಳ ಕೊಲ್ಲಿ ತೀರದಲ್ಲಿ ಜಂಟಿ ನೌಕಾ ಕಸರತ್ತು ನಡೆಸಿದ್ದವು. ಇದರಲ್ಲಿ ಭಾಗಿಯಾಗುವ ಸಲುವಾಗಿ ಇರಾನ್‌ನ ಐಆರ್‌ಐಎಸ್‌ ಡೆನಾ ನೌಕೆ ಆಗಮಿಸಿತ್ತು. ಕವಾಯತು ಬಳಿಕ ಸಿಂಗಾಪುರಕ್ಕೆ ತೆರಳಿ ಅಲ್ಲಿ ಕೆಲ ದುರಸ್ತಿ ಕೈಗೊಂಡು ಇರಾನ್‌ನತ್ತ ನೌಕೆ ಪ್ರಯಾಣ ಬೆಳೆಸಿತ್ತು.

ಭೀಕರ ದಾಳಿ:
ಡೆನಾ ನೌಕೆ ಬುಧವಾರ ಬೆಳಗಿನ ಜಾವ ಶ್ರೀಲಂಕಾದ ಕರಾವಳಿ ನಗರ ಗಾಲೆಯಿಂದ 40 ನಾಟಿಕಲ್‌ ಮೈಲು ದೂರದ ಅಂತಾರಾಷ್ಟ್ರೀಯ ಸಮುದ್ರ ವಲಯದಲ್ಲಿ ಸಾಗುತ್ತಿದ್ದ ವೇಳೆ ದಿಢೀರನೆ ಮುಳುಗಿದೆ. ಈ ವೇಳೆ ನೌಕೆ ಸಿಬ್ಬಂದಿಯಿಂದ ರವಾನೆಯಾದ ತುರ್ತು ಸಂದೇಶ ಆಲಿಸಿ ಸಮೀಪದ ಪ್ರದೇಶದಲ್ಲಿ ಕಣ್ಗಾವಲು ನಡೆಸುತ್ತಿದ್ದ ಲಂಕಾದ ನೌಕಾಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ನೌಕೆ ಮುಳುಗುವ ಹಂತದಲ್ಲಿದ್ದು ಅದರಲ್ಲಿದ್ದ 32 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ 87ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ ಎಂದು ಶ್ರೀಲಂಕಾದ ಅಧಿಕಾರಿಗಳು ತಿಳಸಿದ್ದಾರೆ.

ಇರಾನ್‌ ನೌಕೆ ಜಲಸಮಾಧಿ ಕುರಿತು ಬುಧವಾರ ಸ್ವತಃ ಹೇಳಿಕೆ ನೀಡಿರುವ ಅಮೆರಿಕದ ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌, ‘ಶ್ರೀಲಂಕಾದ ದಕ್ಷಿಣ ಕರಾವಳಿ ತೀರದಲ್ಲಿ ನಾವು ಇರಾನ್ ನೌಕೆಯನ್ನು ಹೊಡೆದುರುಳಿಸಿದ್ದೇವೆ. ಸಬ್‌ಮರೀನ್‌ನಿಂದ ಹಾರಿಸಲಾದ ಟಾರ್ಪೆಡೋ (ಕ್ಷಿಪಣಿ) ಮೂಲಕ ನೌಕೆಯನ್ನು ಧ್ವಂಸಗೊಳಿಸಲಾಯಿತು. ಎರಡನೇ ವಿಶ್ವಯುದ್ಧದ ಬಳಿಕ ಇಂಥ ದಾಳಿ ಇದೇ ಮೊದಲು’ ಎಂದು ಹೇಳಿದ್ದಾರೆ.

ಆಗಿದ್ದೇನು?

  • ಫೆ.18ರಿಂದ ಫೆ.25ರವರೆಗೆ ಭಾರತ- ಇರಾನ್‌ ನಡುವೆ ವಿಶಾಖಪಟ್ಟಣದಲ್ಲಿ ಸಮರಾಭ್ಯಾಸ ನಡೆದಿತ್ತು
  • ಅದರಲ್ಲಿ ಭಾಗಿಯಾಗಲು ಇರಾನ್‌ನಿಂದ ‘ಐಆರ್‌ಐಎಸ್‌ ಡೆನಾ’ ಯುದ್ಧ ನೌಕೆ ಭಾರತಕ್ಕೆ ಆಗಮಿಸಿತ್ತು
  • ಸಮರಾಭ್ಯಾಸ ಬಳಿಕ ಸಿಂಗಾಪುರದಲ್ಲಿ ದುರಸ್ತಿ ಕೆಲಸ ಮುಗಿಸಿಕೊಂಡು ತವರಿಗೆ ವಾಪಸಾಗುತ್ತಿತ್ತು
  • ಶ್ರೀಲಂಕಾದ ದಕ್ಷಿಣ ಭಾಗದ ಗಾಲೆಯಿಂದ 75 ಕಿ.ಮೀ. ದೂರದಲ್ಲಿ ನೌಕೆ ಸಾಗುತ್ತಿದ್ದಾಗ ಅಮೆರಿಕ ದಾಳಿ
  • ಜಲಾಂತರ್ಗಾಮಿಯಿಂದ ಕ್ಷಿಪಣಿ ಹಾರಿಸಿ ಧ್ವಂಸ. ಇರಾನ್ ನೌಕೆಯಿಂದ ನೆರವಿಗೆ ಲಂಕಾಗೆ ಮೊರೆ
  • ಲಂಕಾ ನೌಕಾ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ 87 ಶವ ಪತ್ತೆ. 61 ಜನರು ನಾಪತ್ತೆ. ಗಾಯಾಳುಗಳಿಗೆ ಚಿಕಿತ್ಸೆ

Leave a Comment

Your email address will not be published. Required fields are marked *