ಸಮಗ್ರ ನ್ಯೂಸ್: ಇರಾನ್ನ ಮಾಜಿ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ನಿಧನಕ್ಕೆ ಭಾರತ ಸಂತಾಪ ಸೂಚಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಗುರುವಾರ ಹೊಸದಿಲ್ಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.
ಇರಾನ್ ರಾಯಭಾರ ಕಚೇರಿಯಲ್ಲಿ ತೆರೆಯಲಾಗಿದ್ದ ಸಂತಾಪ ಪುಸ್ತಕಕ್ಕೆ ಸಹಿ ಹಾಕಿದ ಮಿಶ್ರಿ, ಖಾಮಿನೈ ಅವರ ನಿಧನದ ಹಿನ್ನೆಲೆಯಲ್ಲಿ ಇರಾನ್ ಸರ್ಕಾರ ಮತ್ತು ಜನತೆಗೆ ಭಾರತದ ಪರವಾಗಿ ಸಂತಾಪ ಸೂಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಇಸ್ಲಾಮಿಕ್ ಗಣರಾಜ್ಯ ಇರಾನ್ ನ 86 ವರ್ಷದ ಮಾಜಿ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರು 1989ರಿಂದ ದೇಶದ ಸರ್ವೋಚ್ಚ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಸೈನಿಕ ಕಾರ್ಯಾಚರಣೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಖಾಮಿನೈ ಅವರ ನಿಧನದ ಕುರಿತು ಭಾರತ ಸರ್ಕಾರದ ಮೊದಲ ಅಧಿಕೃತ ಪ್ರತಿಕ್ರಿಯೆಯ ಭಾಗವಾಗಿ ವಿದೇಶಾಂಗ ಕಾರ್ಯದರ್ಶಿಯ ಈ ಭೇಟಿ ನಡೆದಿದೆ.







