ಸಮಗ್ರ ನ್ಯೂಸ್: ಅಮೆರಿಕಾ ಮತ್ತು ಇಸ್ರೇಲ್ ಸಂಯುಕ್ತವಾಗಿ ಇರಾನ್ (Iran) ಮೇಲೆ ನಡೆಸಿದ ಭಾರಿ ಸೇನಾ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Khameni) ಮೃತಪಟ್ಟಿದ್ದಾರೆ ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಅಲ್ಲದೇ ಅವರ ಕುಟುಂಬದ ಹಲವು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
ಇರಾನ್ ಸರ್ವೋಚ್ಚ ನಾಯಕನ ಹತ್ಯೆ ಸುದ್ದಿ ನಂತರ ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಯುದ್ಧದ ಭಯ ಎಲ್ಲೆಡೆ ಹರಡಿದೆ. ಈ ಮೂರು ದೇಶಗಳಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಯುದ್ಧದ ಭೀಕರತೆ ಹಲವು ಸಾವು ನೋವುಗಳಿಗೆ ಕಾರಣವಾಗಿದೆ.
ಇಸ್ರೇಲ್- ಅಮೆರಿಕ ದಾಳಿಯಲ್ಲಿ ಖಮೇನಿ ಅವರ ಮಗಳು, ಮೊಮ್ಮಗ, ಸೊಸೆ ಮತ್ತು ಅಳಿಯ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ. ಇದಲ್ಲದೆ ಇರಾನ್ನ ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಮೊಹಮ್ಮದ್ ಪಕ್ಪೌರ್ ಕೂಡ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇಸ್ರೇಲ್ ಪ್ರಧಾನಿ “ಖಮೇನಿ ಇನ್ನು ಜೀವಂತರಿಲ್ಲ ಎಂಬ ಹಲವು ಚಿಹ್ನೆಗಳಿವೆ” ಎಂದು ಹೇಳಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿ “ಖಮೇನಿ ನಿಧನರಾಗಿದ್ದಾರೆ, ಅವರ ನಾಯಕತ್ವದಿಂದ ಪೀಡಿತರಾದ ಜನರಿಗೆ ನ್ಯಾಯ ದೊರಕಿದೆ” ಎಂದು ಘೋಷಿಸಿದ್ದಾರೆ.







