ಗ್ರಾಹಕರ ಕೋಟಿ ಮೌಲ್ಯದ ಚಿನ್ನ ಲಪಟಾಯಿಸಿದ ಬ್ಯಾಂಕ್ ಮ್ಯಾನೇಜರ್

ಸಮಗ್ರ ನ್ಯೂಸ್: ಆನ್‌ಲೈನ್‌ ಗೇಮಿಂಗ್‌ ಹಾಗೂ ಕ್ಯಾಸಿ ನೋ ಜೂಜಾಟದಿಂದ ಮಾಡಿಕೊಂಡಿದ್ದ ಲಕ್ಷಾಂತರ ರೂ. ಸಾಲ ತೀರಿಸಲು ಗ್ರಾಹಕರು ಬ್ಯಾಂಕಿನಲ್ಲಿ ಅಡಮಾನ ಇರಿಸಿದ್ದ 4 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದು ಫೈನಾನ್ಸ್‌ ನಲ್ಲಿ ಅಡಮಾನ ಇರಿಸಿದ್ದ ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಸಹಾಯಕ ಮ್ಯಾನೇಜರ್‌ನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Ad Widget ... ..

ವಿದ್ಯಾರಣ್ಯಪುರ ನಿವಾಸಿ ಕಿರಣ್‌ ಕುಮಾರ್‌(35) ಬಂಧಿತ ಸಹಾಯಕ ಮ್ಯಾನೇಜರ್‌. ಆರೋಪಿಯಿಂದ 1 ಕೆಜಿಗೂ ಅಧಿಕ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಯು ಸುಮಾರು 6 ತಿಂಗಳಿಂದ ಬ್ಯಾಂಕಿನ ಲಾಕರ್‌ನಲ್ಲಿ ಇರಿಸಿದ್ದ ಅಡಮಾನದ 2 ಕೆಜಿ 780 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಮೂಲದ ಕಿರಣ್‌ ಕುಮಾರ್‌, ವಿದ್ಯಾರಣ್ಯಪುರದಲ್ಲಿ ವಾಸವಾಗಿದ್ದ. ಗಿರಿನಗರದಲ್ಲಿರುವ ರಾಷ್ಟ್ರೀಯ ಬ್ಯಾಂಕ್‌ವೊಂದರ ಶಾಖೆಯಲ್ಲಿ ಕೆಲ ವರ್ಷಗಳಿಂದ ಸಹಾಯಕ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ.

Ad Widget

ಈ ಮಧ್ಯೆ ಜೂಜಾಟದ ಚಟಕ್ಕೆ ಬಿದ್ದಿದ್ದ ಆತ, ಆನ್‌ಲೈನ್‌ ಗೇಮಿಂಗ್‌ ಹಾಗೂ ಕ್ಯಾಸಿನೋದಲ್ಲಿ ಲಕ್ಷಾಂತರ ರೂ. ಹೂಡಿಕೆ ಮಾಡಿ ಕಳೆದುಕೊಂಡಿದ್ದು ಸುಮಾರು 60 ಲಕ್ಷ ರೂ.ಗೂ ಅಧಿಕ ಸಾಲ ಮಾಡಿಕೊಂಡಿದ್ದಾನೆ. ಅದನ್ನು ತೀರಿಸಲು ಬೇರೆ ಮಾರ್ಗ ತಿಳಿಯದೆ ಬ್ಯಾಂಕ್‌ನಲ್ಲಿ ಗ್ರಾಹಕರು ಅಡಮಾನ ಇರಿಸಿದ್ದ ಚಿನ್ನಾಭರಣಗಳನ್ನು ಕಳೆದ 6 ತಿಂಗಳಿಂದ ಹಂತ-ಹಂತವಾಗಿ ಕಳವು ಮಾಡಿ ಫೈನಾನ್ಸ್‌ನಲ್ಲಿ ಅಡಮಾನ ಇರಿಸಿದ್ದ. ಅಲ್ಲದೆ ಅಡಮಾನದಿಂದ ಬಂದ ಹಣದಲ್ಲಿ ಸ್ವಲ್ಪ ಮಾತ್ರ ಸಾಲ ತೀರಿಸಿದ್ದು ಇನ್ನಷ್ಟು ಹಣವನ್ನು ಮತ್ತೆ ಗೇಮಿಂಗ್‌ಗೆ ಹೂಡಿಕೆ ಮಾಡಿ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಆನ್‌ಲೈನ್‌ ಗೇಮಿಂಗ್‌, ಬೆಟ್ಟಿಂಗ್‌ ಹಾಗೂ ಕ್ಯಾಸಿನೋ ವ್ಯಾಮೋಹಕ್ಕೆ ಅಂಟಿಕೊಂಡಿದ್ದ ಕಿರಣ್‌, ಹಲವು ವರ್ಷಗಳಿಂದ ಆನ್‌ ಲೈನ್‌ನಲ್ಲಿ ಜೂಜಾಡುತ್ತಿದ್ದ. ಇದರಿಂದ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದ. ಮಾಡಿಕೊಂಡ ಸಾಲದಿಂದ ಹೊರಬರಲು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲೇ ಕಳ್ಳತನಕ್ಕೆ ಇಳಿದಿದ್ದನು. ಬ್ಯಾಂಕಿನ ಆಂತರಿಕಾ ವಿಚಾರಣೆಯಲ್ಲಿ ಆರೋಪಿ ಕಿರಣ್‌, ವಲಯ ಕಚೇರಿಗೆ ಹಾಜರಾಗಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಅಲ್ಲದೆ ಚಿನ್ನವನ್ನು ಕತ್ರಿಗುಪ್ಪೆಯ 2 ಖಾಸಗಿ ಫೈನಾನ್ಸ್‌ನಲ್ಲಿ ಅಡಮಾನ ಇರಿಸಿದ್ದಾಗಿ ಬಾಯ್ಬಿಟ್ಟಿದ್ದ. ಈ ಕುರಿತು ಬಂದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಿಳೆಯೊಬ್ಬರು 6 ತಿಂಗಳ ಹಿಂದೆ ಬ್ಯಾಂಕಿನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದರು. ಸಾಲ ತೀರಿಸಿ ಒಡವೆ ಬಿಡಿಸಿಕೊಳ್ಳಲು ಇತ್ತೀಚೆಗೆ ಬ್ಯಾಂಕಿಗೆ ಬಂದಿದ್ದರು. ಪೂರ್ಣ ಸಾಲ ಪಾವತಿಸಿ ಪ್ಯಾಕೇಟ್‌ನಲ್ಲಿದ್ದ ಚಿನ್ನವನ್ನು ಪರಿಶೀಲಿಸಿದಾಗ ಕೆಲ ಆಭರಣಗಳು ನಾಪತ್ತೆಯಾಗಿದ್ದವು.. ಈ ಬಗ್ಗೆ ಬ್ಯಾಂಕ್‌ನ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು. ಅದರಿಂದ ಆತಂಕಗೊಂಡ ಅಧಿಕಾರಿಗಳು, ಬ್ಯಾಂಕಿನ ಲಾಕರ್‌ ಪರಿಶೀಲಿಸಿದಾಗ ಕಳೆದ ಒಂದು ವರ್ಷದಿಂದ ಚಿನ್ನ ಸಾಲ ಮಂಜೂರು ಮಾಡಲಾಗಿದ್ದ 207 ಪ್ಯಾಕೇಟ್‌ ಗಳಲ್ಲಿ ಸುಮಾರು 21 ಪ್ಯಾಕೇಟ್‌ಗಳಲ್ಲಿದ್ದ ಚಿನ್ನ ಕಾಣೆಯಾಗಿತ್ತು. 3 ಪ್ಯಾಕೇಟ್‌ಗಳಲ್ಲಿ ಎಲ್ಲ ಚಿನ್ನ ನಾಪತ್ತೆಯಾಗಿತ್ತು. ಹೀಗೆ ಕಳೆದ 6 ತಿಂಗಳಲ್ಲಿ ಒಟ್ಟು 2 ಕೆಜಿ, 783 ಗ್ರಾಂನ ಅಂದಾಜು 4 ಕೋಟಿ ರೂ. ಮೌಲ್ಯದ ಚಿನ್ನ ಕಳವಾಗಿರುವುದು ಗೊತ್ತಾಗಿತ್ತು. ಈ ಸಂಬಂಧ ಬ್ಯಾಂಕ್‌ನ ವಲಯ ಮ್ಯಾನೇಜರ್‌ ಪೊಲೀಸರಿಗೆ ದೂರು ನೀಡಿದ್ದರು.

Leave a Comment

Your email address will not be published. Required fields are marked *