ಸಮಗ್ರ ನ್ಯೂಸ್: ಪಂಚ ಗ್ಯಾರಂಟಿ ಮತ್ತು ಅದರ ಯಶಸ್ವಿ ಅನುಷ್ಠಾನದ ಸಾಧನೆ, ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಗಳ ಕೊಡುಗೆ ಮತ್ತು ರಾಜಕೀಯ ಮೇಲಾಟದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಶುಕ್ರವಾರ ‘ಸಾವಿರ ದಿನ’ ಪೂರೈಸಿದೆ.
ಪಂಚ ಗ್ಯಾರಂಟಿಗಳಿಂದ ಗಲ್ಲಿಯಿಂದ ದಿಲ್ಲಿ, ನ್ಯೂಯಾರ್ಕ್ವರೆಗೂ ಚರ್ಚೆಯಾಗಿರುವ ಸರ್ಕಾರ ತನ್ನ ಸಾವಿರ ದಿನ ಪೂರೈಸಿದೆ. ಈ ಮೈಲುಗಲ್ಲಿನ ನೆನಪಿಗಾಗಿ ‘1001’ನೇ ದಿನವಾದ ಶನಿವಾರ ‘ಭೂ ಗ್ಯಾರಂಟಿ’ ಘೋಷಣೆ ಮಾಡುತ್ತಿದೆ.
ಹಾವೇರಿಯಲ್ಲಿ ರಾಜ್ಯ ಮಟ್ಟದ ಬೃಹತ್ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶವನ್ನೂ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಸುತ್ತಮುತ್ತಲಿನ 9 ಜಿಲ್ಲೆಗಳ ಒಟ್ಟು 1.10 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಮೂಲಕ ಭೂ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿದೆ.
2023ರ ಮೇ 20 ರಂದು ಪ್ರಚಂಡ ಬಹುಮತದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚುಕ್ಕಾಣಿ ಹಿಡಿಯುವ ಮೂಲಕ ಕಾಂಗ್ರೆಸ್ ಸರ್ಕಾರದ ಅವಧಿ ಶುರುವಾಯಿತು. ಸರ್ಕಾರ ಸಾವಿರ ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ, ನಕ್ಸಲ್ ಮುಕ್ತ ರಾಜ್ಯ ಘೋಷಣೆ, ಒಳ ಮೀಸಲಾತಿ ಜಾರಿ, ರೈತರ ಪರ ದಿಟ್ಟ ನಿರ್ಧಾರಗಳು, ಕಂದಾಯ ಇಲಾಖೆಯಲ್ಲಿ ಸಾಲು-ಸಾಲು ಸುಧಾರಣೆ, ಹಗರಣ ರಹಿತ ಆಡಳಿತದಿಂದ ಜನ ಮನ್ನಣೆ ಗಳಿಸಿದೆ. ಈ ಸಾಧನೆಗಳ ಗುಚ್ಛಕ್ಕೆ ಶನಿವಾರದ ಭೂ ಗ್ಯಾರಂಟಿಯೂ ಸೇರ್ಪಡೆಯಾಗಲಿದೆ.
ಹಾವೇರಿ ಜಿಲ್ಲೆಗೆ, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಜನರು ಬಂದು ಹೋಗಲು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಾಗದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಸಮಾವೇಶದ ಭದ್ರತೆಗಾಗಿ ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ಮಂಗಳೂರು, ಬೆಂಗಳೂರು, ಬೆಳಗಾವಿ ಜಿಲ್ಲೆ ಪೊಲೀಸರನ್ನು ನಿಯೋಜಿಸಲಾಗಿದೆ.
‘ಸರ್ಕಾರಿ, ಖಾಸಗಿ ಜಾಗದಲ್ಲಿ ವರ್ಷಗಟ್ಟಲೇ ವಾಸವಿದ್ದು, ಮಾಲೀಕತ್ವ ಹಕ್ಕಿನಿಂದ ವಂಚಿತರಾಗಿದ್ದ ಲಕ್ಷಕ್ಕೂ ಹೆಚ್ಚು ಮಂದಿಗೆ ಹಕ್ಕುಪತ್ರ ನೀಡಲು ವ್ಯವಸ್ಥೆ ಮಾಡಲಾಗಿದೆ. ಸಭಿಕರಿಗೆ ಯಾವುದೇ ತೊಂದರೆಯಾಗದಂತೆ ಸಿದ್ಧತೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
‘ವಾಹನಗಳ ಸುಗಮ ಸಂಚಾರ ಹಾಗೂ ಭದ್ರತೆಗೆ ಆದ್ಯತೆ ನೀಡಲಾಗಿದೆ. ವಿವಿಧ ಕಡೆಗಳಲ್ಲಿ 60 ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದರು.







