ಟಿ20 ವಿಶ್ವಕಪ್| ಆಸ್ಟ್ರೇಲಿಯಾ ಗೆದ್ದ ಜಿಂಬಾಬ್ವೆ

ಸಮಗ್ರ ನ್ಯೂಸ್: ಸಾಂಘಿಕ ಆಟದ ಪ್ರದರ್ಶನ ನೀಡಿದ ಜಿಂಬಾಬ್ವೆ ತಂಡ ಟಿ20 ವಿಶ್ವಕಪ್‌ ಟೂರ್ನಿ ಪಂದ್ಯದಲ್ಲಿ ಶುಕ್ರವಾರ ಆಸ್ಟ್ರೇಲಿಯಾ ತಂಡಕ್ಕೆ 23 ರನ್‌ಗಳಿಂದ ಆಘಾತ ನೀಡಿತು. ಇದು ಈ ವಿಶ್ವಕಪ್‌ನ ಮೊದಲ ಅಚ್ಚರಿಯ ಫಲಿತಾಂಶವಾಯಿತು.

Ad Widget ... ..

ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಜಿಂಬಾಬ್ವೆ ತಂಡವು, ಆರಂಭ ಆಟಗಾರ ಬ್ರಯಾನ್ ಬೆನೆಟ್‌ ಅವರ ಅಜೇಯ 64 ಮತ್ತು ಇತರ ಆಟಗಾರರ ಉಪಯುಕ್ತ ಕೊಡುಗೆಗಳ ನೆರವಿನಿಂದ 2 ವಿಕೆಟ್‌ಗೆ 169 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಮುಂಚೂಣಿ ಬೌಲರ್‌ಗಳ ಅನುಪಸ್ಥಿತಿ ಎದುರಿಸುತ್ತಿರುವ ಆಸ್ಟ್ರೇಲಿಯಾ ತಂಡವು ನಂತರ 19.3 ಓವರುಗಳಲ್ಲಿ 146 ರನ್‌ಗಳಿಗೆ ಕುಸಿಯಿತು.

Ad Widget

11ನೇ ಕ್ರಮಾಂಕದ ಜಿಂಬಾಬ್ವೆ ತಂಡವು, ಎರಡನೇ ಕ್ರಮಾಂಕದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ಬಹುಭಾಗ ನಿಯಂತ್ರಣ ಸಾಧಿಸಿತ್ತು. ವೇಗದ ಬೌಲರ್‌ಗಳಾದ ಬ್ಲೆಸಿಂಗ್ ಮುಝರಾಬಾನಿ (4-0-17-4) ಮತ್ತು ಬ್ರಾಡ್ ಇವಾನ್ಸ್ (3.3-0-23-3) ಅವರು ಆಸ್ಟ್ರೇಲಿಯಾದ ಅಗ್ರಸರದಿಯನ್ನು ಧ್ವಂಸಗೊಳಿಸಿದರು. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಝರಾಬಾನಿ 100 ವಿಕೆಟ್‌ ಮೈಲಿಗಲ್ಲು ತಲುಪಿದರು.

170 ರನ್ ಗುರಿ ಬೆಂಬತ್ತಿದ ಆಸ್ಟ್ರೇಲಿಯಾ ಆರಂಭದಲ್ಲೇ ಕುಸಿತ ಅನುಭವಿಸಿತು. ಜೋಶ್‌ ಇಂಗ್ಲಿಸ್ (8), ಟ್ರಾವಿಸ್‌ ಹೆಡ್‌ (17), ಕ್ಯಾಮರಾನ್ ಗ್ರೀನ್ (0) ಮತ್ತು ಟಿಮ್‌ ಡೇವಿಡ್ (0) ಅವರು ಬಲುಬೇಗ ನಿರ್ಗಮಿಸಿದರು. ತಂಡದ ಮೊತ್ತ ಆಗ 4 ವಿಕೆಟ್‌ಗೆ 29. ಪವರ್‌ಪ್ಲೇ ಮುಗಿದಾಗ 4 ವಿಕೆಟ್‌ಗೆ 38.

ಮ್ಯಾಟ್‌ ರೆನ್ಶಾ ಏಕಾಂಗಿಯಾಗಿ ಪ್ರತಿರೋಧ ತೋರಿ 44 ಎಸೆತಗಳಲ್ಲಿ 65 ರನ್ ಗಳಿಸಿದರು. ಅವರು ಅನುಭವಿ ಬ್ಯಾಟರ್ ಗ್ಲೆನ್‌ ಮ್ಯಾಕ್ಸ್‌ವೆಲ್ (31 ರನ್, 32 ಎಸೆತ) ಜೊತೆ ಐದನೇ ವಿಕೆಟ್‌ಗೆ 9.5 ಓವರುಗಳಲ್ಲಿ 77 ರನ್ ಸೇರಿಸಿದಾಗ ಆಸ್ಟ್ರೇಲಿಯಾಕ್ಕೆ ಗೆಲುವಿನ ಆಸೆ ಚಿಗುರಿತ್ತು. ಆದರೆ ಲೆಗ್‌ ಸ್ಪಿನ್ನರ್ ರಿಯಾನ್ ಬರ್ಲ್ ಈ ಜೊತೆಯಾಟ ಮುರಿದರು. ವೈಡ್‌ ಆಗಿದ್ದ ಎಸೆತವನ್ನು ಆಡಲು ಹೋದ ಮ್ಯಾಕ್ಸ್‌ವೆಲ್‌ ಚೆಂಡನ್ನು ಸ್ಟಂಪ್ಸ್‌ಗೆ ಎಳೆದುಕೊಂಡರು.

ಕೊನೆಯ ಐದು ಓವರುಗಳಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 56 ರನ್‌ಗಳು ಬೇಕಿದ್ದವು. ಬೆಳಿಗ್ಗೆ ಗಾಯಾಳಾಗಿ ಮೈದಾನ ತೊರೆದಿದ್ದ ಸ್ಟೊಯಿನಿಸ್‌ (6) ಬೇಗ ನಿರ್ಗಮಿಸಿದರು.

ಆಸ್ಟ್ರೇಲಿಯಾದ ಗಾಯಾಳುಗಳ ಪಟ್ಟಿಗೆ ಅವರೂ ಸೇರುವಂತೆ ಕಾಣುತ್ತಿದೆ. 16ನೇ ಓವರಿನ ಐದನೇ ಎಸೆತವನ್ನು ಅವರು ಫುಲ್‌ಟಾಸ್‌ ಆಗಿ ಎಸೆದಿದ್ದರು. ಚೆಂಡನ್ನು ಬರ್ಲ್‌ ಬಲವಾಗಿ ಹೊಡೆದಾಗ ಕ್ಯಾಚ್‌ ಪಡೆಯಲು ಹೋದ ಸ್ಟೊಯಿನಿಸ್‌ ಹೆಬ್ಬೆರಳಿಗೆ ಏಟಾಯಿತು. ನೋವಿನಿಂದ ನರಳಿದ ಅವರು ಪೆವಿಲಿಯನ್‌ಗೆ ಮರಳಿದ್ದರು.

ಬೆನ್‌ ದ್ವಾರ್ಷಿಯಸ್‌ (7) ಅವರು ಬೌಂಡರಿ ಗೆರೆಯ ಬಳಿ ಬೆನೆಟ್‌ ಹಿಡಿದ ಅಮೋಘ ಕ್ಯಾಚಿಗೆ ಮರಳಿದರು. ಇದು ಇವಾನ್ಸ್‌ಗೆ ಮೂರನೇ ವಿಕೆಟ್‌. ಜಿಂಬಾಬ್ವೆ ಗೆಲುವು ಖಚಿತವಾಯಿತು.

ಇದಕ್ಕೆ ಮೊದಲು ಜಿಂಬಾಬ್ವೆ ಅಗ್ರ ಆಟಗಾರರು ಸಂಘಟಿತ ಪ್ರದರ್ಶನ ನೀಡಿದರು. ಬೆನೆಟ್‌ ಏಳು ಬೌಂಡರಿಗಳಿದ್ದ ಅಜೇಯ 64 ರನ್ ಬಾರಿಸಿ ತಂಡಕ್ಕೆ ಭದ್ರ ಬುನಾದಿ ಒದಗಿಸಿದರು. ಮೊದಲ ವಿಕೆಟ್‌ಗೆ 7.3 ಓವರುಗಳಲ್ಲಿ 61 ರನ್‌ಗಳು ಸೇರಿದವು. ವಿಕೆಟ್‌ ಕೀಪರ್ ತಡಿವನಾಶೆ ಮರುಮಾನಿ ಮತ್ತು ರಿಯಾನ್ ಬರ್ಲ್ ತಲಾ 35 ರನ್ ಗಳಿಸಿದರು. ನಾಯಕ ಸಿಕಂದರ್ ರಝಾ 13 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದರು. ಆಸ್ಟ್ರೇಲಿಯಾ ಕೊನೆಯ ಐದು ಓವರುಗಳಲ್ಲಿ 44 ರನ್ ಅಷ್ಟೇ ನೀಡಿತು.

Leave a Comment

Your email address will not be published. Required fields are marked *