ಸಮಗ್ರ ನ್ಯೂಸ್: ನೇಪಾಳದಲ್ಲಿದ್ದುಕೊಂಡು ಆನ್ಲೈನ್ ಹೂಡಿಕೆ ನೆಪದಲ್ಲಿ ಭಾರತೀಯರನ್ನು ಗುರಿಯಾಗಿಸಿ ವಂಚನೆ ನಡೆಸಿರುವ ತಂಡವನ್ನು ಭೇದಿಸಿರುವ ಇಲ್ಲಿನ ಸೆನ್ ಕ್ರೈಂ ಠಾಣೆಯ ಪೊಲೀಸರು ಈ ಸಂಬಂಧ 11 ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಒಂದು ಲ್ಯಾಪ್ ಟಾಪ್, ವಿವಿಧ ಕಂಪನಿಗಳ 21 ಮೊಬೈಲ್ ಪೋನ್ಗಳು, ವಿವಿಧ ಕಂಪನಿಗಳ 20 ಸಿಮ್ ಕಾರ್ಡ್ಗಳು, ಬೇರೆ ಬೇರೆ ಬ್ಯಾಂಕ್ಗಳ 20 ಡೆಬಿಟ್ ಕ್ರೆಡಿಟ್ ಕಾರ್ಡ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಇಲ್ಲಿ ಗುರುವಾರ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ‘ಒಟ್ಟು 16 ಭಾರತೀಯರು ಹಾಗೂ ಒಬ್ಬ ಚೀನಾ ಪ್ರಜೆ ಸೇರಿ 17 ಮಂದಿ ಸೇರಿಕೊಂಡು ಆನ್ಲೈನ್ ಹೂಡಿಕೆ ನೆಪದಲ್ಲಿ ದೇಶದ ವಿವಿಧ ಭಾಗಗಳ ಜನರನ್ನು ವಂಚಿಸುತ್ತಿದ್ದರು. 11 ಆರೋಪಿಗಳನ್ನು ಇಲ್ಲಿನ ಸೆನ್ ಕ್ರೈ ಠಾಣೆಯ ಪೊಲೀಸರು ಬಂಧಿಸಿದ್ದು, ಇನ್ನುಳಿದ ಐವರು ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಕಾರ್ಯ ಮುಂದುವರಿದಿದೆ. ಚೀನಾದ ಆರೋಪಿಯನ್ನು ನೇಪಾಳದ ಪೊಲೀಸರು ಬಂಧಿಸಿದ್ದಾರೆ’ ಎಂದು ತಿಳಿಸಿದರು.
‘ಗುಜರಾತಿನ ಭಾವನಗರ ಜಿಲ್ಲೆಯ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳದ ಕೋಲ್ಕತ್ತದ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಾಂಡ್ನ ಸಿಂಗಬುಮ್ ಜಿಲ್ಲೆ ಪುಪ್ಲ ಶಿವ ಕುಮಾರ್ ರಾವ್ (32), ಮಿಥುನ್ ಕುಮಾರ್ ಮಂಗರಾಜ್ (38), ಡಿಯೋಗರ್ ಜಿಲ್ಲೆಯ ರಾಜೇಶ್ ಮಂಡನ್ (30), ಉತ್ತರ ಪ್ರದೇಶದ ಮಾವೋ ಜಿಲ್ಲೆಯ ಗೌರವ್ ಪಾಂಡೆ (24), ಸುಲ್ತಾನ್ ಪುರ್ ಜಿಲ್ಲೆಯ ಹರ್ಷ್ ಮಿಸ್ರಾ (22), ಲಖನೌ ಜಿಲ್ಲೆಯ ಮೊಹಮ್ಮದ್ ಆಕೀಬ್ ಅಲಿ (27) , ಝಾನ್ಸಿ ಜಿಲ್ಲೆಯ ನೌಶಾದ್ ಅಲಿ (34), ಬಿಹಾರದ ನಳಂದ ಜಿಲ್ಲೆಯ ರಾಜೀವ್ ರಂಜನ್ ಕುಮಾರ್ (30), ರಾಜಾಸ್ಥಾನದ ಜೈಪುರದ ಓಂ ಪ್ರಕಾಶ್ ಯಾದವ್ (37) ಬಂಧಿತರು’ ಎಂದು ತಿಳಿಸಿದರು.






