ಸಮಗ್ರ ನ್ಯೂಸ್: ಗಣರಾಜ್ಯೋತ್ವದ ಹಿನ್ನೆಲೆ ಕಳೆದ ಒಂದು ವಾರಕ್ಕೂ ಹೆಚ್ಚು ದಿನದಿಂದ ದೆಹಲಿಯಲ್ಲಿ ಕಟ್ಟುನಿಟ್ಟಿನ ಭದ್ರತೆ ಆಯೋಜನೆಯಾಗಿತ್ತು. ಸೋಮವಾರ ಕೆಂಪು ಕೋಟೆಯಲ್ಲಿ ಗಣರಾಜ್ಯೋತ್ಸವ ಆಚರಣೆಗೂ ಮುನ್ನವೇ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಸುಮಾರು 10,000 ಕೆಜಿ ಸ್ಫೋಟಕಗಳು ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ಕೆಂಪುಕೋಟೆಯ ಬಳಿಯ ಮೆಟ್ರೋ ಸಮೀಪ ಕಾರೊಂದು ಸ್ಫೋಟಗೊಂಡಿತ್ತು. ಪಾಕಿಸ್ತಾನವು ಏಳು ತಿಂಗಳಲ್ಲಿ ಎಂಟು ನೂರು ಬಾರಿ ಡ್ರೋನ್ ದಾಳಿ ನಡೆಸಲು ಯತ್ನಿಸಿತ್ತು. ಈ ಎಲ್ಲ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಸಿಬ್ಬಂದಿ, ಪೊಲೀಸರು ಉಗ್ರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು.
ಸದ್ಯ ಈ ಕಾರ್ಯಾಚರಣೆಯ ಭಾಗವಾಗಿ, ನಾಗೌರ್ ಜಿಲ್ಲೆಯ ಹರ್ಸೌರ್ ಗ್ರಾಮದ ಜಮೀನೊಂದರ ಮೇಲೆ ದಾಳಿ ನಡೆಸಿದಾಗ ಸ್ಫೋಟಕಗಳು ಪತ್ತೆಯಾಗಿದೆ. ಈ ಸಂಬಂಧ 58 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ಖಚಿತ ಮಾಹಿತಿ ಮೇರೆಗೆ ರಾಜಸ್ಥಾನ ಪೊಲೀಸರು ಹರ್ಸೌರ್‌ನ ಜಮೀನಿನ ಮೇಲೆ ದಾಳಿ ಮಾಡಿದಾಗ 187 ಚೀಲಗಳಲ್ಲಿ ತುಂಬಿಟ್ಟಿದ್ದ ಒಟ್ಟು 9,550 ಕೆಜಿ ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ದಾಳಿ ವೇಳೆ ಸ್ಥಳದಲ್ಲಿದ್ದ ಸುಲೈಮಾನ್ ಖಾನ್ ಎಂಬಾತನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳಿದೆ. ಸದ್ಯ ಈತನ ವಿರುದ್ಧ ಸ್ಫೋಟಕ ಕಾಯ್ದೆ 1884, ಸ್ಫೋಟಕ ವಸ್ತುಗಳ ಕಾಯ್ದೆ 1908 ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಾಗೌರ್ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚ್ಛವಾ ಮಾಹಿತಿ ಹಂಚಿಕೊಂಡಿದ್ದಾರೆ.
187 ಚೀಲಗಳಲ್ಲಿ ತುಂಬಿದ್ದ ಒಟ್ಟು 9,550 ಕೆಜಿ ಅಮೋನಿಯಂ ನೈಟ್ರೇಟ್ ಹಾಗೂ 9 ಕಾರ್ಟನ್ ಬಾಕ್ಸ್‌ನಲ್ಲಿದ್ದ ಡೆಟೋನೇಟರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು 12 ಕಾರ್ಟನ್ ಮತ್ತು 15 ಬಂಡಲ್ ನೀಲಿ ಫ್ಯೂಸ್ ತಂತಿ ಹಾಗೂ 12 ಕಾರ್ಟನ್ ಮತ್ತು 5 ಬಂಡಲ್ ಕೆಂಪು ಫ್ಯೂಸ್ ತಂತಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜೊತೆಗೆ ಅನೇಕ ಸ್ಫೋಟಕ ವಸ್ತುಗಳನ್ನು ದಾಳಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.







