ಸಮಗ್ರ ನ್ಯೂಸ್: ಹೊಸ ವರ್ಷಕ್ಕೆ ಶುಭಾಶಯ ಕೋರುವ ವಾಟ್ಸ್‌ಆ್ಯಪ್ ಹಾಗೂ ಸಾಮಾನ್ಯ ಸಂದೇಶಗಳು ಹಾಗೂ ಲಿಂಕ್‌ಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಇದೇ ಈಗ ಡಿಜಿಟಲ್ ಹ್ಯಾಕರ್ಸ್‌ಗಳಿಗೆ ಬಂಡವಾಳವಾಗಿದ್ದು, ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ.
2026ರ ಕ್ಯಾಲೆಂಡರ್ ವರ್ಷವನ್ನು ಸ್ವಾಗತಿಸಲು ಕೆಲವೇ ಗಂಟೆಗಳು ಬಾಕಿ ಇವೆ. ಈ ನಡುವೆ ಅಪರಿಚಿತ ವ್ಯಕ್ತಿ, ಬ್ಯಾಂಕ್‌ಗಳು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ನಿಮಗೆ ಲಿಂಕ್‌ಗಳ ಸಮೇತ ವಾಟ್ಸ್‌ಆಯಪ್ ಮತ್ತು ಸಾಮಾನ್ಯ ಸಂದೇಶಗಳು ಬರಲಿವೆ.
ಆದರೆ, ಅದು ಕೇವಲ ಶುಭಾಶಯ ಕೋರುವ ಸಂದೇಶಗಳಲ್ಲ. ಅವು ನಿಮ್ಮ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡು, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಳವು ಮಾಡಲು ಸೈಬರ್ ವಂಚಕರು ಕಳುಹಿಸಿರುವ ಎಪಿಕೆ ಫೈಲ್ ಕೂಡಾ ಆಗಿರುತ್ತವೆ. ಸಾಮಾನ್ಯವಾಗಿ ಶುಭಾಶಯ ಸಂದೇಶ ಕಳುಹಿಸುವ ಅಪರಿಚಿತ ವ್ಯಕ್ತಿಗಳು, ಅದರಲ್ಲಿ ಎಪಿಕೆ ಫೈಲ್ ಅನ್ನು ತುಂಬಿ ಕಳುಹಿಸುತ್ತಾರೆ. ಒಂದು ವೇಳೆ ಆ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಎಪಿಕೆ ಫೈಲ್ ಡೌನ್‌ಲೋಡ್ ಆಗುತ್ತದೆ. ಆ ಕ್ಷಣದಿಂದಲೇ ನಿಮ್ಮ ಮೊಬೈಲ್ ಸೈಬರ್ ವಂಚಕರ ಕೈ ಸೇರುತ್ತದೆ.
ಲಿಂಕ್ ಕ್ಲಿಕ್ ಮಾಡಿದರೆ ಬ್ಯಾಂಕ್ ಖಾತೆಯೇ ಖಾಲಿ, ಪಾರ್ಟಿ ಆಫರ್, ಗಿಫ್ಟ್ ಲಿಂಕ್‌ಗಳೂ ಅಪಾಯಕಾರಿ, ಅಧಿಕೃತ ಆಯಪ್ ಸ್ಟೋರ್ ಮಾತ್ರ ಬಳಕೆಗೆ ಸೂಚನೆ, ಒಟಿಪಿ, ಪಾಸ್‌ವರ್ಡ್ ಹಂಚಿಕೊಳ್ಳದಿರಲು ಸಲಹೆ, ಸಂದೇಹವಿದ್ದರೆ ಸಹಾಯವಾಣಿ 1930ಗೆ ಕರೆಮಾಡಿ
ಮೊಬೈಲ್‌ನಲ್ಲಿರುವ ಆಯಪ್‌ಗಳು ತಾವಾಗಿಯೇ ತೆರೆದುಕೊಳ್ಳುವುದು, ಯಾವುದಕ್ಕೂ ಸಂಪರ್ಕ ಪಡೆಯಬಹುದು, ಕೆಲವು ಸಂದರ್ಭಗಳಲ್ಲಿ ಬ್ಯಾಂಕ್‌ನ ವಹಿವಾಟುಗಳನ್ನು ನಡೆಯುತ್ತದೆ. ತಮ್ಮ ವೈಯಕ್ತಿಕ ಮಾಹಿತಿಗಳು ಶೇರ್ ಆಗುತ್ತಿರುತ್ತವೆ. ಅಂದರೆ ನಿಮ್ಮ ಮೊಬೈಲ್‌ನ್ನು ಯಾರೋ ಅಪರಿಚಿತರು ಹ್ಯಾಕ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದರ್ಥ. ಸಂದೇಶಗಳು ಮಾತ್ರವಲ್ಲ, ಫೋಟೋಗಳು, ವಿಡಿಯೋಗಳು, ಫೈಲ್ ಮಾದರಿಯ ಸಂದೇಶಗಳಲ್ಲೂ ಎಪಿಕೆ ಫೈಲ್ ಇರುತ್ತದೆ.
ಶುಭಾಶಯ ಸಂದೇಶಗಳು ಮಾತ್ರವಲ್ಲ, ಹೊಸ ವರ್ಷಕ್ಕೆ ನಮ್ಮ ಹೋಟೆಲ್, ಪಬ್, ರೆಸ್ಟೋರೆಂಟ್, ರೆಸಾರ್ಟ್, ಹೋಮ್‌ಸ್ಟೇಗಳಲ್ಲಿ ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ. ಅದಕ್ಕೆ ರಿಯಾಯಿತಿ ದರದಲ್ಲಿ ಪಾಲ್ಗೊಳ್ಳಬಹುದು. ಪಾರ್ಟಿಯಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ವಿಶೇಷವಾದ ಉಡುಗೊರೆ ನೀಡಲಾಗುತ್ತದೆ. ಅದಕ್ಕಾಗಿ ಈ ಕೂಡಲೇ ನೋಂದಾಯಿಸಿಕೊಳ್ಳಿ ಎಂದು ಲಿಂಕ್ ಕಳುಹಿಸುತ್ತಾರೆ. ಅಂತಹ ಲಿಂಕ್‌ಗಳು ಕೂಡ ಅಪಾಯಕಾರಿಯಾಗಿವೆ. ಆ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದಾರ ಎಪಿಕೆ ಫೈಲ್ ಅಥವಾ ಮಾಲ್‌ವೇರ್ ತೆರೆದುಕೊಂಡು, ಬ್ಯಾಂಕಿಂಗ್ ಪಾಸ್‌ವರ್ಡ್, ಒಟಿಪಿ ಹಾಗೂ ಇತರೆ ಮಾಹಿತಿಗಳು ಸೋರಿಕೆ ಆಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೊಸ ವರ್ಷದ ಸಂದರ್ಭದಲ್ಲಿ ವಾಟ್ಸ್‌ಆಯಪ್ ಹಾಗೂ ಸಾಮಾನ್ಯವಾಗಿ ಬರುವ ಸಂದೇಶಗಳು, ಉಡುಗೊರೆಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅವುಗಳನ್ನು ನಿರ್ಲಕ್ಷ್ಯ ಮಾಡಿ. ಒಂದು ವೇಳೆ ಅನುಮಾನ ಬಂದ ಕೂಡಲೇ ಪೊಲೀಸ್ ಸಹಾಯವಾಣಿ 112 ಅಥವಾ ಸೈಬರ್ ಸಹಾಯವಾಣಿ 1930ಗೆ ಕರೆ ಮಾಡುವಂತೆ ಕೋರಿದ್ದಾರೆ.







