ವಿಟ್ಲ: ಕೋಳಿ ಅಂಕಕ್ಕೆ ಪೊಲೀಸ್ ದಾಳಿ| ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಮಠಂದೂರು ಸೇರಿ 27 ಮಂದಿ ವಿರುದ್ಧ ಪ್ರಕರಣ

ಸಮಗ್ರ ನ್ಯೂಸ್: ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೇಪು ಗ್ರಾಮದ ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದವರ ಮೇಲೆ ಭಾನುವಾರ ದಾಳಿ ಮುಂದುವರೆಸಿರುವ ವಿಟ್ಲ ಪೊಲೀಸರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು ಸೇರಿ 27 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Ad Widget ... ..

ಖಚಿತ ಮಾಹಿತಿ ಬಂದ ಮೇರೆಗೆ ವಿಟ್ಲ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹಲವು ಜನರು ಗುಂಪು ಸೇರಿ ಹಿಂಸಾತ್ಮಕವಾಗಿ ಕೋಳಿ ಅಂಕ ಆಟವಾಡುತ್ತಿರುವುದು ಕಂಡು ಬಂದಿದೆ. ಅಲ್ಲಿ ನೆರೆದಿದ್ದವರಿಗೆ ಅಕ್ರಮ‌ ಕೋಳಿ ಅಂಕದ ಬಗ್ಗೆ ಕಾನೂನು ತಿಳುವಳಿಕೆ ನೀಡಿದರೂ ಸೇರಿದ್ದ ಜನರು ಸ್ಥಳದಿಂದ ತೆರಳದೇ ನಿಂತಿದ್ದರು. ಅಲ್ಲದೇ ಸ್ಥಳದಲ್ಲಿದ್ದ ಬಿಜೆಪಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ, ಮುಖಂಡರಾದ ಮುರಳೀಧರ ರೈ, ದಯಾನಂದ ಉಜಿರೆಮಾರು, ಹರಿಪ್ರಸಾದ್‌ ಯಾದವ್‌, ಅಶೋಕ ಶೆಟ್ಟಿ ವಿಟ್ಲ, ರಾಜೇಶ್‌ ಬಾಳೆಕಲ್ಲು ಅವರು ಅಲ್ಲಿ ಸೇರಿದ್ದ ಜನರಿಗೆ ಕಾನೂನು ಬಾಹಿರ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ನೀಡಿರುತ್ತಾರೆ ಎಂದು ಆರೋಪಿಸಲಾಗಿದೆ.

Ad Widget

ಮುಂದುವರೆದು ಸ್ಥಳದಲ್ಲಿ ಅಗತ್ಯ ಪೊಲೀಸ್ ಭದ್ರತೆಯನ್ನು ಏರ್ಪಡಿಸಿ ಕೃತ್ಯದಲ್ಲಿ ತೊಡಗಿದ್ದ 20 ಜನರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ 20 ಹುಂಜ ಹಾಗೂ ಕೋಳಿ ಅಂಕಕ್ಕೆ ಬಳಸುವ ಕತ್ತಿ (ಬಾಲು) ವಶಪಡಿಸಿಕೊಳ್ಳಲಾಗಿದೆ. ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ನೀಡಿದ ಹಾಗೂ ಕೃತ್ಯದಲ್ಲಿ ತೊಡಗಿದ್ದವರು ಸೇರಿ ಒಟ್ಟು 27 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *