ಗೃಹಲಕ್ಷ್ಮಿ‌ಹಣ ಲೆಕ್ಕದಲ್ಲಿ ಎಡವಿದ ಸಚಿವೆ| ಆರ್ಥಿಕ ಇಲಾಖೆಯನ್ನು ಹೊಣೆ ಮಾಡಿದ ಡಿಸಿಎಂ

ಸಮಗ್ರ ನ್ಯೂಸ್: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುದಾನದ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಜಟಾಪಟಿ ನಡೆದಿದೆ. ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿಷಾದ ವ್ಯಕ್ತಪಡಿಸಿದ ಪ್ರಸಂಗ ನಡೆದರೆ, ಮತ್ತೊಂದೆಡೆ ಸಚಿವೆ ಬೆನ್ನಿಗೆ ನಿಂತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು ಇಲಾಖೆಯನ್ನೇ ದೂರುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರ ಖಾತೆಯತ್ತ ಬೊಟ್ಟು ಮಾಡಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Ad Widget ... ..

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ಅಂಕಿಅಂಶಗಳಲ್ಲಿ ವ್ಯತ್ಯಾಸವಿರುವುದನ್ನು ಒಪ್ಪಿಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸದನದಲ್ಲಿ ಇಂದು ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದರು. ಅಧಿಕಾರಿಗಳಿಂದಾದ ಲೋಪದಿಂದ ತಪ್ಪು ಮಾಹಿತಿ ರವಾನೆಯಾಗಿದೆ, ಇದನ್ನು ಸರಿಪಡಿಸಿಕೊಂಡು ಕೆಲಸ ಮಾಡುತ್ತೇನೆ, ಯಾರ ಮನಸ್ಸಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಆದರೆ, ಸಚಿವರ ಈ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದರು.

Ad Widget

ವಿಪಕ್ಷಗಳ ವಾಗ್ದಾಳಿ ತೀವ್ರವಾಗುತ್ತಿದ್ದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ರಕ್ಷಣೆಗೆ ಧಾವಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಚ್ಚರಿಯ ಹೇಳಿಕೆ ನೀಡಿದರು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಹಣವನ್ನು ಫೈನಾನ್ಸ್ ಡಿಪಾರ್ಟ್ಮೆಂಟ್ (ಆರ್ಥಿಕ ಇಲಾಖೆ) ಇನ್ನೂ ಬಿಡುಗಡೆ ಮಾಡಿಲ್ಲ. ಹಣಕಾಸು ಇಲಾಖೆಯೇ ಹಣ ಕೊಡದಿದ್ದರೆ ಸಚಿವರು ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು. ಹಣಕಾಸು ಖಾತೆಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿರ್ವಹಿಸುತ್ತಿರುವುದರಿಂದ, ಡಿಕೆಶಿ ಅವರ ಈ ಹೇಳಿಕೆಯು ಪರೋಕ್ಷವಾಗಿ ಸಿಎಂ ಇಲಾಖೆಯ ವೈಫಲ್ಯವನ್ನು ಎತ್ತಿತೋರಿಸಿದಂತಾಯಿತು. ಈ ಬೆಳವಣಿಗೆ ಸದನದಲ್ಲಿ ಕೆಲಕಾಲ ಗೊಂದಲಕ್ಕೂ ಕಾರಣವಾಯಿತು.

ಸಚಿವೆಯ ವಿಷಾದದ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಹಿರಿಯ ನಾಯಕ ಸುರೇಶ್ ಕುಮಾರ್, ಕೇವಲ ವಿಷಾದ ವ್ಯಕ್ತಪಡಿಸಿದರೆ ಸಾಲದು. ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರ ರಾಜ್ಯದ ಮಹಿಳೆಯರಿಗೆ ದಾರಿ ತಪ್ಪಿಸಿದೆ. ಹೀಗಾಗಿ ಸಚಿವರು ರಾಜ್ಯದ ಸಮಸ್ತ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಮರು ಉತ್ತರ ನೀಡಿದ ಹೆಬ್ಬಾಳ್ಕರ್, ನಾವು 54 ಸಾವಿರ ಕೋಟಿ ರೂ. ಹಣವನ್ನು ನೀಡಿದ್ದೇವೆ. ನಾನು ವಿಷಾದ ವ್ಯಕ್ತಪಡಿಸಿದ ಮೇಲೂ ನಿಮಗೆ ತೃಪ್ತಿಯಿಲ್ಲವೆಂದರೆ ಕ್ಷಮೆ ಕೇಳಲೂ ಸಿದ್ಧಳಿದ್ದೇನೆ. ಆದರೆ ಒಬ್ಬ ಮಹಿಳಾ ಸಚಿವೆ ಎಂಬ ಕಾರಣಕ್ಕೆ ನನ್ನ ಮೇಲೆ ಈ ರೀತಿ ಮುಗಿಬೀಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಶರಣ ಪ್ರಕಾಶ್ ಪಾಟೀಲ್ ಕೂಡ ಹೆಬ್ಬಾಳ್ಕರ್ ಅವರಿಗೆ ದನಿಗೂಡಿಸಿದರು.

ಸಚಿವೆ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಅಶೋಕ್, ತಪ್ಪಾಗಿದೆ ಎಂದು ಸದನದಲ್ಲಿ ಹೇಳಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಚಿವ ಎಚ್.ಕೆ.ಪಾಟೀಲ್, ವಿಪಕ್ಷ ನಾಯಕರ ಒತ್ತಾಯದಂತೆ ಸಚಿವೆ ವಿಷಾದ ವ್ಯಕ್ತಪಡಿಸಿದ್ದಾರೆ. ಇಲ್ಲಿಗೆ ಈ ಚರ್ಚೆ ಮುಗಿಸಿ ಎಂದರು.

ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಕಂತು ಪಾವತಿಸಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣವಿಲ್ಲ. ಸರ್ಕಾರ ದಿವಾಳಿಯಾಗಿದೆ. ಎರಡು ತಿಂಗಳ ಕಂತು ಬಾಕಿ ಉಳಿಸಿಕೊಳ್ಳಲು ಇದು ಲಾಂಗ್ ಜಂಪ್ ಅಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಇದಕ್ಕೆ ಆಡಳಿತ ಪಕ್ಷದ ಶಾಸಕರು ಆಕ್ಷೇಪ ವ್ಯಕ್ತಪಡಿಸಿ ವಿಪಕ್ಷ ಸದಸ್ಯರ ವಿರುದ್ಧ ಮುಗಿಬಿದ್ದರು.

Leave a Comment

Your email address will not be published. Required fields are marked *