ಸಮಗ್ರ ನ್ಯೂಸ್: ತಿರುಮಲ ದೇವಸ್ಥಾನದಲ್ಲಿ ಮತ್ತೊಂದು ಭಾರಿ ಹಗರಣ ಬೆಳಕಿಗೆ ಬಂದಿದೆ. ನಕಲಿ ತುಪ್ಪ, ದೇಣಿಗೆ ಕಳ್ಳತನ ಪ್ರಕರಣಗಳ ಬಳಿಕ ಈಗ ಹೊರಬಿದ್ದಿರುವ ‘ಫೇಕ್ ಸಿಲ್ಕ್ ದುಪ್ಪಟ್ಟಾ’ ಹಗರಣ ಭಕ್ತರಲ್ಲಿ ಆಘಾತ ಮೂಡಿಸಿದೆ. ತಿಮ್ಮಪ್ಪನ ಸನ್ನಿಧಿಗೆ ಅರ್ಪಿಸುವ ರೇಷ್ಮೆ ದುಪ್ಪಟ್ಟಗಳ ಖರೀದಿಯಲ್ಲೇ ಕೋಟಿ ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
2015ರಿಂದ 2025ರವರೆಗೆ ಸುಮಾರು 10 ವರ್ಷಗಳ ಅವಧಿಯಲ್ಲಿ 54 ಕೋಟಿ ರೂಪಾಯಿ ಮೌಲ್ಯದ ರೇಷ್ಮೆ ದುಪ್ಪಟ್ಟಗಳ ಖರೀದಿಯಲ್ಲಿ ಅಗ್ಗದ ಪಾಲಿಸ್ಟರ್ ವಸ್ತ್ರಗಳನ್ನು ‘ರೇಷ್ಮೆ ದುಪ್ಪಟ್ಟಗಳೆಂದು’ ಗುರುತಿಸಿ ಪೂರೈಕೆ ಮಾಡಲಾಗಿದೆ ಎಂಬುದು ವಿಜಿಲೆನ್ಸ್ ನಡೆಸಿದ ತನಿಖೆಯಲ್ಲಿ ಸ್ಪಷ್ಟವಾಗಿದೆ. ತಿರುಮಲ ತಿರುಪತಿ ದೇವಸ್ತಾನಂ (TTD) ಈ ವಿಷಯವನ್ನು ಅಧಿಕೃತವಾಗಿ ಆಂಧ್ರಪ್ರದೇಶ ಭ್ರಷ್ಟಾಚಾರ ನಿಗ್ರಹ ದಳ (ACB) ಕ್ಕೆ ಹಸ್ತಾಂತರಿಸಿದೆ.
ಭಕ್ತರಿಗೆ ಕಲ್ಯಾಣ ಮಂಟಪದಲ್ಲಿ ವೇದಪಂಡಿತರಿಂದ ಆಶೀರ್ವಚನ ಪಡೆದ ನಂತರ ನೀಡಲಾಗುವ ರೇಷ್ಮೆ ಶಾಲುಗಳು, 100% ಪಾಲಿಸ್ಟರ್ದಿಂದ ಮಾಡಿದ್ದವು ಎಂಬುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ. ವರ್ಷಗಳಿಂದ ಶುದ್ಧ ರೇಷ್ಮೆ ಎಂಬ ಹೆಸರಿನಲ್ಲಿ ಅಗ್ಗದ ವಸ್ತ್ರವನ್ನು ಪೂರೈಸಿ ನಡೆದಿರುವ ಈ ಮೋಸದ ಪ್ರಮಾಣ ಅಚ್ಚರಿ ಹುಟ್ಟಿಸುವಂತಿದೆ.
ಸರ್ಕಾರಿ ಟೆಂಡರ್ ಮೂಲಕ ಶಾಲು ಪೂರೈಕೆಯ ಗುತ್ತಿಗೆಯನ್ನು ಪಡೆದಿದ್ದ ವಿಆರ್ಎಸ್ ಎಕ್ಸ್ಪೋರ್ಟ್ ನಗರಿ ಎಂಬ ಸಂಸ್ಥೆ 10 ವರ್ಷಗಳಿಂದ ಇದೇ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಒಟ್ಟು ಸುಮಾರು 15,000 ದುಪ್ಪಟ್ಟಗಳು ವಿತರಣೆಯಾಗಿ, ಪ್ರತಿಯೊಂದಕ್ಕೂ ₹1389 ದರದಲ್ಲಿ ಬಿಲ್ ಮಾಡಲಾಗಿದೆ. ಆದರೆ ಅವುಗಳು ರೇಷ್ಮೆ ದುಪ್ಪಟ್ಟ ಅಲ್ಲ ಎಂದು ಈಗ ಸ್ಪಷ್ಟವಾಗಿದೆ.







